ರೋಟರಿ ಕ್ಲಬ್ ಮಣಿಪಾಲ್ ಟೌನ್‌ನಿಂದ ರಸ್ತೆ ವಿಭಾಜಕ ಹಸಿರೀಕರಣಕ್ಕೆ ಚಾಲನೆ

ಉಡುಪಿ: ನಗರದ ಸೌಂದರ್ಯ ಹೆಚ್ಚಿಸುವ ಹಾಗೂ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೋಟರಿ ಕ್ಲಬ್ ಮಣಿಪಾಲ್ ಟೌನ್ ವತಿಯಿಂದ ‘ಗ್ರೀನ್ ರಿಬ್ಬನ್’ ಯೋಜನೆಯಡಿ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಿಂದ ಕಾಯಿನ್ ಸರ್ಕಲ್‌ವರೆಗಿನ ಡಾ. ವಿ.ಎಸ್. ಆಚಾರ್ಯ ಹೆದ್ದಾರಿಯ ರಸ್ತೆ ವಿಭಾಜಕದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಪರಿಸರ ಸಂರಕ್ಷಣೆಗೆ ರೋಟರಿ ಸಂಸ್ಥೆ ಕೈಗೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ. ರಸ್ತೆ ವಿಭಾಜಕದಲ್ಲಿ ಗಿಡ ನೆಡುವ ವೇಳೆ ಸುರಿದ ಮಳೆ ಪ್ರಕೃತಿ ಮಾತೆಯ ಆಶೀರ್ವಾದದ ಸಂಕೇತವಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರೋ. ಬಿ.ಎಂ. ಭಟ್ ಮಾತನಾಡಿ, ಈ ವರ್ಷ ಜಿಲ್ಲೆಯಾದ್ಯಂತ 10,000 ಗಿಡಗಳನ್ನು ನೆಟ್ಟು ಮುಂದಿನ ಐದು ವರ್ಷಗಳ ಕಾಲ ಅವುಗಳನ್ನು ಪೋಷಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೋಟರಿ ಕೈಗೊಂಡಿದೆ. ಹಸಿರು ಪರಿಸರ ಹಾಗೂ ತ್ಯಾಜ್ಯಮುಕ್ತ ಸಮಾಜ ನಿರ್ಮಾಣಕ್ಕೆ ರೋಟರಿ ಬದ್ಧವಾಗಿದೆ ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತರು ಮಾತನಾಡಿ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಯಾವುದೇ ಸಾರ್ವಜನಿಕ ಕಾರ್ಯಕ್ಕೆ ನಗರಸಭೆಯ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಭರವಸೆ ನೀಡಿದರು.

ಸಹಾಯಕ ಗವರ್ನರ್ (ಜೋನ್–4) ರೋ. ಹೇಮಂತ್ ಯು. ಕಾಂತ್ ಮಾತನಾಡಿ, “ಹಸಿರು ನಮ್ಮ ಉಸಿರು” ಎಂಬ ಸಂದೇಶದೊಂದಿಗೆ ಪರಿಸರ ಕಾಳಜಿ ವಹಿಸಿರುವ ಗಣೇಶ್ ನಾಯಕ್ ದಂಪತಿಗಳ ಸೇವೆಯನ್ನು ಶ್ಲಾಘಿಸಿದರು.

ಯೋಜನೆಗೆ ಸಂಪೂರ್ಣ ದೇಣಿಗೆ ನೀಡಿದ ರೋ. ಪಿ. ಗಣೇಶ್ ನಾಯಕ್ ಹಾಗೂ ಶೈಲಾ ಗಣೇಶ್ ನಾಯಕ್ ದಂಪತಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ರೋಟರಿ ಕ್ಲಬ್ ಮಣಿಪಾಲ್ ಟೌನ್ ಅಧ್ಯಕ್ಷ ರೋ. ಡಾ. ನವೀನ್ ಕುಮಾರ್ ಕುಡಮಾರ್ ಸ್ವಾಗತಿಸಿ ಯೋಜನೆಯ ಕುರಿತು ಪ್ರಸ್ತಾವನೆ ಮಂಡಿಸಿದರು. ಜೋನಲ್ ಲೆಫ್ಟಿನೆಂಟ್ ನಿತ್ಯಾನಂದ ನಾಯಕ್ ನರಸಿಂಗೆ ಅವರು “ವೃಕ್ಷೋ ರಕ್ಷಿತೋ ರಕ್ಷಿತಃ” ಎಂಬ ಸಂದೇಶ ನೀಡಿ, ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಮುಂದಿನ ಪೀಳಿಗೆಯನ್ನು ರಕ್ಷಿಸಬಹುದು ಎಂದು ಹೇಳಿದರು.

ರೋಟರಿ ಕ್ಲಬ್ ಮಣಿಪಾಲ್ ಟೌನ್ ಕಾರ್ಯದರ್ಶಿ ರೋ. ಸಮರೇಂದ್ರ ನಾಥ್ ಭಟ್ಟಾಚಾರ್ಯ ನಿರೂಪಿಸಿದರು.