ಬಿಗ್ ಬಾಸ್ ಸೀಸನ್ 9 ವಿಜೇತ ರೂಪೇಶ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿರುವ ಗಗನ್. ಎಂ ಚೊಚ್ಚಲ ನಿರ್ದೇಶನದ ‘ಮಂಕು ಭಾಯ್ ಫಾಕ್ಸಿ ರಾಣಿ’ ಕನ್ನಡ ಚಿತ್ರವು ಸಿನಿಮಾ ಜನವರಿ13ಕ್ಕೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ರೂಪೇಶ್ ಶೆಟ್ಟಿ ಜೊತೆ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ, ಪಂಚಮಿ ರಾವ್ ಮುಂತಾದವರು ನಟಿಸಿದ್ದಾರೆ. ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ.
ಚಿತ್ರದ ಬಗ್ಗೆ ಸಿನಿ ಎಕ್ಪ್ರೆಸ್ ಜೊತೆ ಮಾಹಿತಿ ಹಂಚಿಕೊಂಡಿರುವ ರೂಪೇಶ್ , ನಾನು ತುಳು ನಟನಾಗಿ ಐದು ಕನ್ನಡ ಚಿತ್ರಗಳನ್ನು ಮಾಡಿದ್ದೇನೆ, ಆದರೆ ನನ್ನ ಮುಂಬರುವ ಆರನೇ ಚಿತ್ರದಿಂದ ಮಾತ್ರ ಗುರುತಿಸಿಕೊಳ್ಳಲು ಪ್ರಾರಂಭಿಸಿದ್ದೇನೆ. ಇದು ಮೂರು ವರ್ಷಗಳ ಹಿಂದೆ ಮಾಡಿದ ಚಿತ್ರ, ಈಗ ಬಿಡುಗಡೆಯಾಗುತ್ತಿದೆ ಎನ್ನುತ್ತಾ ಕನ್ನಡ ಚಿತ್ರರಂಗದಲ್ಲಿ ಮಹತ್ತರವಾದದ್ದನ್ನು ಸಾಧಿಸುವ ಆಸೆ ಇದೆ ಎಂದು ತನ್ನ ಕನಸನ್ನು ಬಿಚ್ಚಿಟ್ಟಿದ್ದಾರೆ ರೂಪೇಶ್.
ಗಗನ್. ಎಂ ಈ ಹಿಂದೆ ತುಳು ಸಿನಿಮಾವೊಂದಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮಂಕು ಭಾಯ್ ಫಾಕ್ಸಿ ರಾಣಿ ಗಗನ್ ನಿರ್ದೇಶನದ ಮೊದಲ ಚಿತ್ರ. ಈ ಬಗ್ಗೆ ಮಾತನಾಡಿದ ಅವರು, ಮೊದಲು ಇದನ್ನು ಶಾರ್ಟ್ ಮೂವಿ ಮಾಡಲು ಯೋಜನೆ ಹಾಕಲಾಗಿತ್ತು. ರೂಪೇಶ್ ಶೆಟ್ಟಿ ಈ ಸಿನಿಮಾ ಮಾಡಲು ಒಪ್ಪಿಕೊಂಡ ಮೇಲೆ ಇದರ ಕಥೆಯನ್ನು ಚಿತ್ರಕ್ಕೆ ಹೇಗೆ ಬೇಕೋ ಹಾಗೆ ಬದಲಾಯಿಸಲಾಯಿತು. ಪೂರ್ತಿ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿರಲಿದೆ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಜೀವನದಲ್ಲಿ ನಡೆಯುವ ಪ್ರೇಮಕಥೆಯ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಸಿನಿಮಾ ಜನವರಿ 13ಕ್ಕೆ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದಿದ್ದಾರೆ.