ಡೇವಿಸ್‌ ಕಪ್​ಗೆ ವಿದಾಯ ಹೇಳಿದ ರೋಹನ್ ಬೋಪಣ್ಣ..

ಲಖನೌ(ಉತ್ತರ ಪ್ರದೇಶ): ಕರ್ನಾಟಕದ ಬೋಪಣ್ಣ ಅವರು 21 ವರ್ಷಗಳ ಡೇವಿಸ್‌ ಕಪ್‌ ವೃತ್ತಿಜೀವನಕ್ಕೆ ಗೆಲುವಿನ ಮೂಲಕ ವಿದಾಯ ಹೇಳಿದ್ದಾರೆ.ಭಾನುವಾರ ಇಲ್ಲಿನ ಗೋಮತಿ ನಗರದ ವಿಜಯಂತ್ ಖಂಡ್ ಮಿನಿ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಗ್ರೂಪ್ II ಡಬಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಯೂಕಿ ಭಾಂಬ್ರಿ ಜೋಡಿ ಮೊರೊಕ್ಕೊದ ಎಲಿಯಟ್ ಬೆಂಚೆಟ್ರಿಟ್- ಯೂನೆಸ್ ಲಾಲಮಿ ಲಾರೂಸಿ ಅವರನ್ನು 6-2, 6-1 ರಿಂದ ಸೋಲಿಸಿದರು.21 ವರ್ಷಗಳ ಡೇವಿಸ್‌ ಕಪ್‌ ವೃತ್ತಿಜೀವನಕ್ಕೆ ರೋಹನ್ ಬೋಪಣ್ಣ ಗೆಲುವಿನ ಮೂಲಕ ವಿದಾಯ ಹೇಳಿದ್ದಾರೆ.

ಡೇವಿಸ್ ಕಪ್​ನಲ್ಲಿ ನಿನ್ನೆ ವಿಶೇಷವಾಗಿ ಬೋಪಣ್ಣ ಅವರ ದಿನವಾಗಿತ್ತು. ಅವರ 21 ವರ್ಷಗಳ ಸುದೀರ್ಘ ಡೇವಿಸ್ ಕಪ್ ವೃತ್ತಿಜೀವನವನ್ನು ಜಯದ ಸಿಹಿಯೊಂದಿಗೆ ಕೊನೆಗೊಳಿದರು. ಬೋಪಣ್ಣ ಮತ್ತು ಭಾಂಬ್ರಿ ಉತ್ತಮ ಹೊಂದಾಣಿಕೆಯಲ್ಲಿ ಆಟವನ್ನು ಮುನ್ನಡೆಸಿದರು. ಈ ಜೋಡಿ ಸುಮಾರು ಒಂದೂಕಾಲು ಗಂಟೆಯ ಆಟದಲ್ಲಿ ಹೆಚ್ಚು ಮುನ್ನಡೆ ಪಡೆದುಕೊಂಡರು. ಮೊದಲ ಸೆಟ್​ನಲ್ಲಿ ಜೋಡಿ 6-2 ರಿಂದ ಗೆದ್ದರೆ ಎರಡನೇ ಸೆಟ್​ನಲ್ಲಿ ಹೆಚ್ಚಿನ ಅವಕಾಶವನ್ನು ನೀಡದೇ 6-1ರಿಂದ ಗೆಲುವು ಪಡೆದರು.

“ಎಲ್ಲರೂ ನನ್ನನ್ನು ಬೆಂಬಲಿಸಲು ಇಲ್ಲಿರುವುದರಿಂದ ಇಂದು ಮನೆಯಂತೆ ಭಾಸವಾಯಿತು. ನನ್ನ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳು ಸಹ ಎಲ್ಲರೂ ನನ್ನನ್ನು ಹುರಿದುಂಬಿಸಿದರು. ಇದು ನನಗೆ ಭಾವನಾತ್ಮಕ ಕ್ಷಣವಾಗಿದೆ, ಈ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. 2002 ರಲ್ಲಿ ನನ್ನ ಮೊದಲ ಪಂದ್ಯವನ್ನು ಆಡಿದ ನಂತರ ಡೇವಿಸ್ ಕಪ್‌ನಲ್ಲಿ ಸುದೀರ್ಘ ಮತ್ತು ಅದ್ಭುತ ಪ್ರಯಾಣವಾಗಿದೆ. ನಾನು ಯಾವಾಗಲೂ ನನ್ನ ದೇಶಕ್ಕಾಗಿ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತೇನೆ. ಭಾರತಕ್ಕಾಗಿ ಆಡುವುದು ಯಾವಾಗಲೂ ನನ್ನ ವೃತ್ತಿಜೀವನದ ಅತ್ಯಂತ ದೊಡ್ಡ ಕ್ಷಣವಾಗಿದೆ. ನಾನು ಹೊಸಬರಿಗೆ ಸೀಟು ಖಾಲಿ ಮಾಡಬೇಕಾದ ಸಮಯ ಬಂದಿದೆ. ಅನೇಕ ಯುವಕರು ಸ್ಥಾನವನ್ನು ಪಡೆದುಕೊಳ್ಳಲು ಸಿದ್ಧರಾಗಿದ್ದಾರೆ” ಎಂದು ಪಂದ್ಯವನ್ನು ಗೆದ್ದ ನಂತರ ಬೋಪಣ್ಣ ಹೇಳಿದರು.