ಸಾಧಿಸುವ ಛಲವೊಂದಿದ್ದರೆ ವಯಸ್ಸು ಅಡ್ಡಿಯಾಗಲಾರದು ಎಂದು ಜಗತ್ತಿದೆ ಸಾರಿದ ರೋಹನ್ ಬೋಪಣ್ಣ: ಗ್ರ್ಯಾಂಡ್ ಸ್ಲಾಮ್ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಹೆಗ್ಗಳಿಕೆ

ಮೆಲ್ಬರ್ನ್: ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ 2024 ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ನಂತರ ಭಾರತದ ರೋಹನ್ ಬೋಪಣ್ಣ ಗ್ರ್ಯಾಂಡ್ ಸ್ಲಾಮ್ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದು, ಸಾಧನೆಗೆ ವಯಸ್ಸು ಅಡ್ಡಿಯಾಗಲಾರದು ಎನ್ನುವುದನ್ನು ಪ್ರಮಾಣೀಕರಿಸಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ 44 ನೇ ವರ್ಷಕ್ಕೆ ಕಾಲಿಡಲಿರುವ ಬೋಪಣ್ಣ, ಶನಿವಾರ ಮೆಲ್ಬೋರ್ನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಪುರುಷರ ಡಬಲ್ಸ್ ಇತಿಹಾಸದಲ್ಲಿ ಅತ್ಯಂತ ಹಿರಿಯ ನಂಬರ್ ಒನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಡ್ ಲೇವರ್ ಅರೆನಾದಲ್ಲಿ ಶ್ರೇಯಾಂಕ ರಹಿತ ಇಟಾಲಿಯನ್ ಜೋಡಿ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೋರಿ ವಿರುದ್ಧ 7-6 (7/0), 7-5 ಅಂತರದಲ್ಲಿ ಜಯ ಸಾಧಿಸಿದ್ದಾರೆ. ಇದು ತಂಡವಾಗಿ ಅವರ ಚೊಚ್ಚಲ ಪ್ರಶಸ್ತಿಯಾಗಿದೆ ಮತ್ತು 60 ಹಿಂದಿನ ಗ್ರ್ಯಾಂಡ್ ಸ್ಲಾಮ್‌ಗಳ ನಂತರ ಪುರುಷರ ಡಬಲ್ಸ್‌ನಲ್ಲಿ ಬೋಪಣ್ಣ ಅವರ ಮೊದಲ ಪ್ರಶಸ್ತಿಯಾಗಿದೆ.

ಬೋಪಣ್ಣ ಪುರುಷರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟೆನಿಸ್‌ನ ಉತ್ತಮ ಗುಣಮಟ್ಟದ ಆಟದಲ್ಲಿ, ಬೋಪಣ್ಣ ಮತ್ತು ಎಬ್ಡೆನ್ ಒಂದು ಗಂಟೆ 39 ನಿಮಿಷಗಳ ಕಾಲ ನಡೆದ ಫೈನಲ್‌ನಲ್ಲಿ ಗೆದ್ದಿದ್ದಾರೆ. ಪುರುಷರ ಟೆನಿಸ್‌ನಲ್ಲಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಮಾತ್ರ ಭಾರತಕ್ಕೆ ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಟ್ರಯಲ್‌ಬ್ಲೇಜರ್ ಸಾನಿಯಾ ಮಿರ್ಜಾ ಮಹಿಳಾ ಟೆನಿಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ.

2017 ರಲ್ಲಿ ಕೆನಡಾದ ಗೇಬ್ರಿಯೆಲಾ ದಬ್ರೊವ್ಸ್ಕಿ ಅವರೊಂದಿಗೆ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಗೆದ್ದ ಬೋಪಣ್ಣ ಅವರಿಗೆ ಇದು ಅವರ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ.

ಕ್ರೀಡಾ ಜಗತ್ತಿನಲ್ಲಿ ನಿವೃತ್ತಿ ಹೊಂದುವ ವಯಸ್ಸಿನಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದು ವಿಶ್ವ ನಂಬರ್ ವನ್ ಹೆಗ್ಗಳಿಕೆಗೆ ಪಾತ್ರರಾಗಿರುವ ಬೋಪಣ್ಣ ಹಲವರಿಗೆ ಸೂರ್ತಿಯಾಗಿದ್ದಾರೆ.