ಭಾರತದ ಮಾಜಿ ಆಲ್‌ರೌಂಡರ್ ಮತ್ತು 1983 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿರುವ ರೋಜರ್ ಬಿನ್ನಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆಗೆ ಅಗ್ರ ಸ್ಪರ್ಧಿಯಾಗಿದ್ದಾರೆ ಎಂದು ವರದಿಯಾಗಿದೆ. 67 ವರ್ಷದ ಮಾಜಿ ಆಲ್‌ರೌಂಡರ್ ಬಿಸಿಸಿಐ ಮುಖ್ಯಸ್ಥರಾಗಲಿದ್ದಾರೆ ಮತ್ತು ಜೈ ಶಾ ಅವರು ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿ ಮುಂದುವರಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿನಿಧಿಯಾಗಿ ಅಕ್ಟೋಬರ್ 18 ರಂದು ನಡೆಯಲಿರುವ ಚುನಾವಣೆಗಾಗಿ ಬಿಸಿಸಿಐನ ಕರಡು ಮತದಾರರ ಪಟ್ಟಿಯಲ್ಲಿ ಬಿನ್ನಿ ಹೆಸರು ಇತ್ತೀಚೆಗೆ ಕಾಣಿಸಿಕೊಂಡಿತ್ತು. ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹುದ್ದೆಗೆ ಭಾರತದ ಪ್ರತಿನಿಧಿಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬಿನ್ನಿ 27 ಟೆಸ್ಟ್ ಮತ್ತು 72 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಎಂಟು ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಮುಂಬರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಬಿನ್ನಿಯನ್ನು ಹೆಸರಿಸಲಾಗಿದೆ. ಈ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಂತೋಷ್ ಮೆನನ್ ಬಿಸಿಸಿಐ ಎಜಿಎಂನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಬಿನ್ನಿ ಈ ಬಾರಿ ಕರ್ನಾಟಕ ಘಟಕವನ್ನು ಪ್ರತಿನಿಧಿಸಲಿದ್ದು, ಸೌರವ್ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆಯನ್ನು ಪ್ರತಿನಿಧಿಸಲಿದ್ದಾರೆ ಮತ್ತು ರಾಜೀವ್ ಶುಕ್ಲಾ ಬಿಸಿಸಿಐ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ.