ಬೆಂಗಳೂರು: ಈಗಾಗಲೇ ಕೆಜಿಎಫ್ ಚಿತ್ರದಲ್ಲಿ ಮಿಂಚಿರುವ ಯಶ್ ಮುಂದಿನ ವಾರದಿಂದ ‘ಕೆಜಿಎಫ್ 2’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ‘ಕೆಜಿಎಫ್ 2’ ಶೂಟಿಂಗ್ ಆರಂಭವಾಗಿದ್ದು, ಜೂ. 6ರಂದು ಯಶ್ ಕೆಜಿಎಫ್ ತಂಡವನ್ನ ಸೇರಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೆ ಕೆಜಿಎಫ್ 2 ಚಿತ್ರಕ್ಕಾಗಿ ಬಾಲಿವುಡ್ ನ ಈ ನಟಿ ಬರೋದು ಬಹುತೇಕ ಖಚಿತ ಎನ್ನಲಾಗಿದೆ.
ಕೆಜಿಎಫ್ ಚಾಪ್ಟರ್-2 ಕಥೆಯಲ್ಲಿ ಬರಲಿರುವ ಪ್ರಮುಖ ಪಾತ್ರವೊಂದಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಬರೋದು ಖಚಿತ ಎನ್ನಲಾಗಿದೆ. 1970-80 ಕಾಲಘಟ್ಟದ ಪ್ರಧಾನಮಂತ್ರಿ ಪಾತ್ರದಲ್ಲಿ ರವೀನಾ ನಟಿಸಲಿದ್ದಾರಂತೆ. ಭಾಗ 2ರಲ್ಲಿ ಈ ಪಾತ್ರ ಬರಲಿದ್ದು, ಮೊದಲ ಭಾಗದಲ್ಲಿ ಕೇವಲ ಝಲಕ್ ಮಾತ್ರ ತೋರಿಸಲಾಗಿತ್ತು.
1999ರಲ್ಲಿ ಉಪೇಂದ್ರ ನಟಿಸಿ, ನಿರ್ದೇಶಿಸಿದ್ದ ಉಪೇಂದ್ರ ಚಿತ್ರದಲ್ಲಿ ರವೀನಾ ಟಂಡನ್ ಅಭಿನಯಿಸಿದ್ದು, ಅದೇ ಅವರ ಮೊದಲ ಹಾಗೂ ಕೊನೆಯ ಕನ್ನಡ ಸಿನಿಮಾವಾಗಿದೆ.
ಅಲ್ಲದೇ ಕೆಜಿಎಫ್ ಚಾಪ್ಟರ್ 1 ಸ್ವತಃ ರವೀನಾ ಕೂಡ ಕೆಜಿಎಫ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಎರಡನೇ ಭಾಗವನ್ನ ತಮ್ಮದೇ ಪ್ರೊಡಕ್ಷನ್ ವಿತರಣೆ ಮಾಡ್ತಿದ್ದು, ಇದರ ಜತೆಗೆ ನಟಿಸುವ ಮನಸ್ಸು ಕೂಡ ಮಾಡಿದ್ದಾರೆ. 1970ರ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರವನ್ನ ಹೋಲುವಂತ ಕ್ಯಾರೆಕ್ಟರ್ ಅದು ಎನ್ನಲಾಗಿದೆ. ಇನ್ನು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸುತ್ತಾರೆ ಎನ್ನಲಾಗಿದೆ. ಆದ್ರೆ, ಅಧಿಕೃತವಾಗಿ ಈ ಮಾಹಿತಿ ಇನ್ಮಷ್ಟೇ ಹೊರಬೀಳಬೇಕಿದೆ.












