ಮಲ್ಪೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್-2’ ಸಿನಿಮಾದ ಚಿತ್ರೀಕರಣ

ಉಡುಪಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್-2 ಚಿತ್ರದ ಎರಡನೇ ಹಂತದ ಚಿತ್ರೀಕರಣ ಆರಂಭಗೊಂಡಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ಅವರ ತಂಡ ಸದ್ಯ ಮಲ್ಪೆಯ ಪಡುಕರೆಯಲ್ಲಿ ಬೀಡು ಬಿಟ್ಟಿದೆ.

ಇಂದಿನಿಂದ ಉಡುಪಿಯ ಮಲ್ಪೆ ಹಾಗೂ ಪಡುಕರೆ ಪರಿಸರದಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಿದೆ. ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇಂದು ನಾಯಕನಿಗೆ ಗ್ಯಾಂಗ್ ಸ್ಟರ್ ತಂಡವೊಂದು ಮುಖಾಮುಖಿಯಾಗುವ ದೃಶ್ಯವನ್ನು ಚಿತ್ರೀಕರಣ ಮಾಡಲಾಯಿತು. ಇದರಲ್ಲಿ ಆರು ಪಜೇರೋ ಕಾರುಗಳ ಮಧ್ಯೆ ನಾಯಕ ಯಶ್ ಕಂದು ಪ್ಯಾಂಟ್, ಬಿಳಿ ಅಂಗಿ ಧರಿಸಿ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡರು. ನಾಯಕಿ ಶ್ರೀನಿಧಿ ಶೆಟ್ಟಿ ಗೋಲ್ಡನ್ ಮತ್ತು ಬ್ಲ್ಯಾಕ್ ಕಾಸ್ಟ್ಯೂಮ್‌ ನಲ್ಲಿ ಮಿಂಚಿದರು.

ಉಡುಪಿಯಲ್ಲಿ ಮೂರು ದಿನಗಳ ಕಾಲ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಮಲ್ಪೆ ಪಡುಕರೆ ಬೀಚ್, ಮಲ್ಪೆ ಬಂದರಿನಲ್ಲಿ ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.