ಮತ್ತೆ ಮುಳುಗಿತು ಮಂಗಳೂರು: ಅವೈಜ್ಞಾನಿಕ ಕಾಮಗಾರಿಗಳಿಂದ ನದಿಯಂತಾಯ್ತು ಸ್ಮಾರ್ಟ್ ನಗರದ ರಸ್ತೆಗಳು

ಮಂಗಳೂರು: ಪ್ರತಿ ಬಾರಿಯಂತೆಯೆ ಈ ಬಾರಿಯೂ ಮಂಗಳೂರು ನಗರ ಸಂಪೂರ್ಣ ಮುಳುಗಡೆಯಾಗಿದ್ದು, ವಾಹನ ಸವಾರರು, ಪಾದಚಾರಿಗಳು ದೋಣಿಯ ಸಹಾಯದಿಂದ ಕೆಲಸ ಕಾರ್ಯಗಳಿಗೆ ಹೋಗಬೇಕಾದಂತಹ ಪರಿಸ್ಥಿತಿ ಉಂಟಾಗಿದೆ. ಕಳೆದ ಹಲವು ವರ್ಷಗಳಿಂದ ಈ ಸ್ಥಿತಿಯು ಸಾಮಾನ್ಯವೆಂಬಾತಾಗಿದ್ದು, ಸ್ಮಾರ್ಟಿ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿರುವ ವಿಶ್ವ ಪ್ರಸಿದ್ದ ಮಂಗಳೂರು ನಗರಕ್ಕೆ ಈ ಸಮಸ್ಯೆಯು ಕಪ್ಪು ಚುಕ್ಕೆಯಂತಾಗಿ ಕಾಡುತ್ತಿದೆ.

ಚರಂಡಿ ವ್ಯವಸ್ಥೆಯೇ ಇಲ್ಲದ ಹೆದ್ದಾರಿಗಳು, ಹೊಂಡ ಬಿದ್ದ ರಸ್ತೆಗಳು, ಅವೈಜ್ಞಾನಿಕ ಕಾಮಗಾರಿಗಳು, ನೀರಿನ ಹರಿವು ಸರಾಗವಾಗಲು ಮಳೆಗಾಲಕ್ಕೂ ಮುನ್ನ ಚರಂಡಿಗಳನ್ನು ಸ್ವಚ್ಛಗೊಳಿಸಿ ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳು ತೋರುವ ನಿರ್ಲಕ್ಷ್ಯ, ಪ್ಲಾಸ್ಟಿಕ್ ಕಸಗಳನ್ನು ಎಲ್ಲೆಂದರಲ್ಲಿ ಬಿಸಾಕುವ ಸಾರ್ವಜನಿಕರು ಇವೆಲ್ಲಾ ಸೇರಿ ಮಂಗಳೂರು ನಗರವನ್ನು ಮುಳುಗಿಸಿವೆ. ಮಂಗಳೂರಿನ ಬಹುತೇಕ ಪ್ರದೇಶಗಳು ಮುಳುಗಡೆಯಾಗಿದ್ದು, ವಾಹನಗಳ ಸಾಲು ಆಮೆಯಂತೆ ನಿಧಾನವಾಗಿ ಸಂಚರಿಸುವಂತಾಗಿದೆ. ಅಂಗಡಿ ಮುಂಗಟ್ಟು, ಮನೆಗಳಿಗೂ ನೀರು ನುಗ್ಗಿ ಕೆಸರು ನೀರಿನ ಓಕುಳಿ ಎಲ್ಲೆಲ್ಲೂ ಚೆಲ್ಲಿದೆ.

ಪ್ರತಿ ಮಳೆಗಾಲದಲ್ಲಿಯೂ ನದಿ ನೀರಿನಲ್ಲಿ ಸಂಚರಿಸುವಂತೆ ವಾಹನಗಳು ರಸ್ತೆಗಳಲ್ಲಿ ಸಂಚರಿಸುವ ದೃಶ್ಯಗಳು ಕಂಡು ಬರುತ್ತಿದ್ದರೂ, ಈ ನಿಟ್ಟಿನಲ್ಲಿ ಜಿಲ್ಲಾಡಳಿತವಾಗಲೀ, ಸಂಸದರಾಗಲೀ, ಶಾಸಕರಾಗಲೀ, ಪಾಲಿಕೆಯಾಗಲೀ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದು ವಿಪರ್ಯಾಸವೆ ಸರಿ. ಹಿಂದೆಲ್ಲಾ ಈ ದೃಶ್ಯಗಳು ಮುಂಬಯಿ, ದೆಹಲಿ ಮತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಂಡುಬರುತ್ತಿದ್ದು, ಇತ್ತೀಚಿಗೆ ಮಂಗಳೂರಿನಲ್ಲಿಯೂ ಈ ದೃಶ್ಯ ಸರ್ವೇ ಸಾಮಾನ್ಯವಾಗಿದ್ದು, ಇದು ನಿಜವಾಗಿಯೂ ಬುದ್ದಿವಂತರ ಜಿಲ್ಲೆಯೋ ಎಂದು ಪ್ರಶ್ನಿಸುವಂತಾಗಿದೆ.