ಕಾರ್ಕಳ ಬಿಜೆಪಿ ವತಿಯಿಂದ ಸುನಿಲ್ ಕುಮಾರ್ ವಿಜಯೋತ್ಸವ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ

ಕಾರ್ಕಳ: ಭಾನುವಾರದಂದು ಬಿಜೆಪಿ ಕಾರ್ಕಳ ವತಿಯಿಂದ ಸುನೀಲ್ ಕುಮಾರ್ ವಿಜಯೋತ್ಸವ, ಮತದಾರರಿಗೆ ವಂದನೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು, ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್, ಅವರು ಹಣಕ್ಕಾಗಿ ಏನು ಮಾಡಲೂ ಸಿದ್ದ. ಅವರು ಪ್ರಹ್ಲಾದ್ ಜೋಷಿ, ಅನಂತ್ ಕುಮಾರ್ ವಿರುದ್ಧ ಸ್ಪರ್ಧಿಸಿ ಸೋತರು, ಎಲ್ಲಾ ಕಡೆಗಳಲ್ಲಿ ಸೋತು ಡೀಲ್ ಕುದುರಿಸುವವರು. ಟೈಗರ್ ಗ್ಯಾಂಗ್ ಹೆಸರಿನಲ್ಲಿ ಉತ್ತರ ಕರ್ನಾಟಕದಲ್ಲಿ ಹಿಂದುಗಳ ಹತ್ಯೆಯನ್ನು ಮಾಡಿಸಿದ್ದಾರೆ‌, ಆ ಹತ್ಯೆ ಮಾಡಿದ ಕೊಲೆಗಡುಗರು ಈಗಲೂ ಗುಲ್ಬರ್ಗಾ ಜೈಲಿನಲ್ಲಿದ್ದಾರೆನ್ನುವುದಕ್ಕೆ ದಾಖಲೆಗಳು ಬೇಕಾ ಎಂದು ಮುತಾಲಿಕ್ ಅವರನ್ನು ಪ್ರಶ್ನಿಸಿದರು.

ಮುತಾಲಿಕ್ ಹೆಸರಿನಲ್ಲಿ ಮತ ಬೇಟೆ ಮಾಡಿದ ಬೆಂಬಲಿಗರು ಕಾಂಗ್ರೆಸ್ ಪಕ್ಷ ಪರ ಮತ ಕೇಳುತ್ತಾರೆ. ಪ್ರತಿ ಚುನಾವಣೆಯಲ್ಲಿ ಹಣ ಪಡೆದು ಹೋಗುತ್ತಾರೆ. ಅಗತ್ಯ ಬಿದ್ದಾಗ ಎಲ್ಲಾ ದಾಖಲೆಗಳನ್ನು ಬಿಡುಗಡೆಗೊಳಿಸುವೆ. ಕಾರ್ಕಳ ಪುರಸಭೆಯ ಚಿಲ್ಲರೆ ವ್ಯಕ್ತಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಕಾರ್ಕಳದ ಜನತೆ ಎಂದಿಗೂ ಸಭ್ಯತೆ ಮೀರಿಲ್ಲ, ಅಪಪ್ರಚಾರವನ್ನು ನಂಬಿಲ್ಲ, ನನಗೂ ವೈಯಕ್ತಿಕ ಬದುಕಿದೆ. ಪ್ರಜಾಪ್ರಭುತ್ವ ಮೇಲೆ ನಂಬಿಕೆ ಹಾಗೂ ಕಾರ್ಕಳ ತಾಲೂಕಿನ ಅಭಿವೃದ್ಧಿಗೆ ಮತ ನೀಡಿದ್ದೀರಿ ಅದಕ್ಕಾಗಿ ಮತದಾರರಿಗೆ ಹಾಗೂ ಕಾರ್ಯಕರ್ತರ ಪರಿಶ್ರಮಕ್ಕೆ ಧನ್ಯವಾದಗಳು ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ದೇಶ ವಿರೋಧಿ ಚಟುವಟಿಕೆಗಳು ವಿಜೃಂಭಿಸುತ್ತವೆ. ಭಟ್ಕಳ, ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಈಗಾಗಲೇ ಗರಿಗೆದರಿದೆ. ಇನ್ನು ದ.ಕ ಜಿಲ್ಲೆಯ ಗತಿಯೇನು? ಎಂದ ಅವರು ಹಿಂದುಗಳ ವಿರುದ್ಧ ವಿಧಾನಸಭೆಯಲ್ಲಿ ಮೊದಲು ದನಿ ಎತ್ತಿವುದೇ ನಾನು. ಸ್ವರ್ಣ ಕಾರ್ಕಳದ ಪರಿಕಲ್ಪನೆ ಮತ್ತೆ ಮುಂದುವರೆಯಲಿದೆ ಎಂದರು.

ವಿಪಕ್ಷ ನಾಯಕನಾಗಲು ಸಿದ್ದ: ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಲು ಹಿಂದುಗಳ ವಿರುದ್ಧ ನಡೆಯುವ ಕೃತ್ಯಗಳ ವಿರುದ್ದ ಧ್ವನಿ ಎತ್ತಲು ನಾನು ಸಿದ್ದ ಕಾರ್ಕಳ ಕ್ಷೇತ್ರದ ಜನ ನನಗೆ ಬೆಂಬಲ ನೀಡಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ನಮಗೆ ಕಾಂಗ್ರೆಸ್ ಪಕ್ಷದ ಬಿಟ್ಟಿ ಭಾಗ್ಯಗಳು ಬೇಡ , ನಮಗೆ ಹಿಂದುತ್ವ ಹಾಗೂ ಅಭಿವೃದ್ಧಿಗಳು ಬೇಕು ಉಡುಪಿ ಜಿಲ್ಲೆ ಐದು ಕ್ಷೇತ್ರದಲ್ಲಿ ಬಿಜೆಪಿ  ಗೆಲ್ಲುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದೆ ಎಂದರು. ಕಾರ್ಕಳ ಕಾಂಗ್ರೆಸ್ ಪಕ್ಷಕ್ಕೆ ದರಿದ್ರ ಹಿಡಿದಿದೆ. ವೈಯಕ್ತಿಕ ಟೀಕೆ ಸಮಂಜಸವಾದುದಲ್ಲ. ಒಂದು ವಾರದಲ್ಲಿ ಸಂಪುಟ ರಚನೆಗೊಂಡು ಬಿಟ್ಟಿ ಪ್ರಚಾರಗಳ ಸುರಿಮಳೆ ಸುರಿಸಲಿದೆ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಗಳು ನಮ್ಮ ಜಿಲ್ಲೆಯಲ್ಲಿ ಇಲ್ಲ, ಸರಕಾರಿ ಬಸ್ ಗಳಲ್ಲಿ ನೀಡುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಕ್ಷೇತ್ರಾಧ್ಯಕ್ಷ  ಮಹಾವೀರ ಹೆಗ್ಡೆ ಮಾತನಾಡಿ ಕಾಂಗ್ರೆಸ್ ಬಿ ಟೀಂ ಅನ್ನು ಸೃಷ್ಟಿಸಿ ಅಪಪ್ರಚಾರದ ಮೂಲಕ ಶಾಸಕರ ಹೆಸರನ್ನು ಕೆಡಿಸಿತ್ತು. ಕಾಂಗ್ರೆಸ್ ಹೆಂಡ ಹಣ ಹಂಚಿಕೆ ಮಾಡಿ ಶಾಸಕರ ಹೆಸರನ್ನು ತೇಜೋವಧೆ ಮಾಡಲಾಗಿತ್ತು ಎಂದರು.

ವಿಜಯಕುಮಾರ್, ಬೋಳ ಪ್ರಭಾಕರ್ ಕಾಮತ್, ಸಾಣೂರು ನರಸಿಂಹ ಕಾಮತ್,  ಮಣಿರಾಜ ಶೆಟ್ಟಿ, ಕೆ.ಪಿ ಶೆಣೈ , ಕುಡುಪುಲಾಜೆ ಮಹೇಶ್ ಶೆಟ್ಟಿ ಬೆಳುವಾಯಿ‌ ಸದಾನಂದ ಶೆಟ್ಟಿ ,  ರಾಮಚಂದ್ರ ಅಚಾರ್ಯ ಬಜಗೋಳಿ ರವೀಂದ್ರ ಶೆಟ್ಟಿ, ಸತೀಶ್ ಪೈ  ಮೊದಲಾದವರು ಉಪಸ್ಥಿತರಿದ್ದರು.

ನಗರ ಬಿಜೆಪಿ ಅಧ್ಯಕ್ಷ ರವೀಂದ್ರ ಮೊಯಿಲಿ ಸ್ವಾಗತಿಸಿದರು.

ಕಾರ್ಕಳ ಅನಂತ ಶಯನದಿಂದ ಹೊರಟ ವಿಜಯೋತ್ಸವದ ಮೆರವಣಿಗೆ ಕಾರ್ಕಳ ಪುರಸಭೆ, ಮಾರಿಗುಡಿ , ಬಸ್ ನಿಲ್ದಾಣ, ಮೂರುಮಾರ್ಗ , ಎಸ್ ಜೆ ಅರ್ಕೆಡ್ , ರಥಬೀದಿ ಕಾರ್ಕಳ ವೆಂಕಟರಮಣ ದೇವಾಲಯ , ಗ್ಯಾಲಕ್ಸಿ ಮೂಲಕ ಸಾಲ್ಮರ ಮಾರ್ಗವಾಗಿ ಕಾರ್ಕಳ ಬಂಡಿಮಠ ಬಸ್ ನಿಲ್ದಾಣ ತಲುಪಿತು.