ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20: ಭಾರತ ಲೆಜೆಂಡ್ಸ್ ಚಾಂಪಿಯನ್

ರಾಯ್ ಪುರ್: ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಲೆಜೆಂಡ್ಸ್ ತಂಡವು ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ 14 ರನ್ ಗಳ ರೋಚಕ ಜಯ ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಇಂಡಿಯಾ ಲೆಜೆಂಡ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181ರನ್ ಗಳನ್ನು ಕಲೆಹಾಕಿತು. ಭಾರತದ ಪರ ಸಚಿನ್ 30 ರನ್ ಗಳಿಸಿದರೆ, ಯುವರಾಜ್ ಸಿಂಗ್ 60ರನ್ ಮತ್ತು ಯೂಸುಫ್ ಪಠಾಣ್ 62 (ಅಜೇಯ) ರನ್ ಗಳಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.

ಭಾರತ ನೀಡಿದ 182 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ಲೆಜೆಂಡ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಲಂಕಾ ಪರ ಸನತ್ ಜಯಸೂರ್ಯ 43 ರನ್ ಗಳಿಸಿದರೆ, ಚಿಂತಕ ಜಯಸಿಂಘೆ 40 ಮತ್ತು ಕೌಶಲ್ಯ ವೀರರತ್ನೆ 38 ರನ್ ಗಳಿಸಿದರು. ಅಂತಿಮವಾಗಿ ಲಂಕಾ ತಂಡ 14 ರನ್ ಗಳ ಅಂತರದಲ್ಲಿ ಭಾರತದ ಎದುರು ಸೋಲು ಕಂಡಿತು.