ರಸ್ತೆ ಅಪಘಾತ: ತೆಲುಗು ಚಿತ್ರನಟ ಸಾಯಿ ಧರ್ಮ ತೇಜ್‌ ಸ್ಥಿತಿ ಗಂಭೀರ

ಹೈದರಾಬಾದ್‌: ಬೈಕ್ ಸ್ಕಿಡ್ ಆಗಿ ತೆಲುಗು ಚಿತ್ರನಟ ಸಾಯಿ ಧರ್ಮ ತೇಜ್‌ ಅವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ಹೈದರಾಬಾದ್‌ನ ಕೇಬಲ್‌ ಸೇತುವೆಯ ಮೇಲೆ ನಡೆದಿದೆ.

ವೇಗವಾಗಿ ಚಲಿಸುತ್ತಿದ್ದ ಬೈಕ್‌ ಸ್ಕಿಡ್‌ ಆಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಸಾಯಿ ಧರ್ಮ ತೇಜ್‌ ಅವರು ಹೆಲ್ಮೆಟ್‌ ಧರಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಘಾತ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಾಯಿ ತೇಜ್ ಅವರ ಸ್ಥಿತಿ ಗಂಭೀರವಾಗಿದ್ದು, ಜುಬಿಲಿ ಹಿಲ್ಸ್‌ನ ಅಪೋಲೊ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಚಿರಂಜೀವಿ ಕುಟುಂಬದ ಸದಸ್ಯರಾಗಿರುವ ಸಾಯಿ ಧರ್ಮ ತೇಜ್‌ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಲು ಚಿರಂಜೀವಿ, ಪವನ್‌ಕಲ್ಯಾಣ್‌, ವರುಣ್‌ ತೇಜ್‌ ಸೇರಿದಂತೆ ಹಲವರು ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.