ಕೊಳಚೆಯಿಂದ ನಿರ್ಜೀವಗೊಂಡ ಇಂದ್ರಾಣಿ ನದಿಗೆ ಜೀವಕೊಡಲು ಹೊರಟರು ! ಗಮನ ಸೆಳೆಯಿತು ಉಡುಪಿ ಯುವಕರ “ಇಂದ್ರಾಣಿ ಉಳಿಸಿ”ಅಭಿಯಾನ

ನದಿ ಎನ್ನುವುದು ಪರಿಸರದ ಕಣ್ಣು, ನಾಗರೀಕತೆಯ ಪ್ರತಿಬಿಂಬ, ನದಿ ಇದ್ದರೆ ಇಡೀ ಊರಿಗೆ ಊರೇ ನೆಮ್ಮದಿಯಿಂದಿರುತ್ತದೆ, ನದಿಯ ಅಸ್ತಿತ್ವವೇ ಆ ಊರಿನ ಭವ್ಯತೆಯನ್ನು, ಪರಂಪರೆಯನ್ನು, ಸೊಗಡನ್ನು ಹೇಳುತ್ತದೆ. ಆದರೆ ಅದೇ ನದಿ ಕಲುಶಿತವಾದರೆ? ತ್ಯಾಜ್ಯದ ಗುಂಡಿಯಾದರೆ? ಇಡೀ ಊರಿಗೆ ಆ ಕಳಂಕ ಮೆತ್ತಿಕೊಳ್ಳುತ್ತದೆ. ಪರಿಸರದ ಜೊತೆ ಜೊತೆಗೆ ಸಕಲ ಜೀವಿಗಳು ನೆಮ್ಮದಿ ಕಳಕೊಳ್ಳುತ್ತದೆ.

ಉಡುಪಿಯ ಇಂದ್ರಾಣಿ ನದಿಯೂ ಅಷ್ಟೇ  ಆಧುನೀಕರಣ, ನಗರೀಕರಣದ ಹೊಡೆತಕ್ಕೆ ನಲುಗಿ ಹೋಗಿದೆ.

ತ್ಯಾಜ್ಯ ,ಕೊಳಚೆಯನ್ನು ತನ್ನೊಳಗೆ ತುಂಬಿಕೊಂಡು ಹರಿಯುವ ಇಂದ್ರಾಣಿ ನದಿಯ ಅಂದ ದಿನೇ ದಿನೇ ಕುಂದುತ್ತಿದೆ. ಜನಪ್ರತಿನಿಧಿಗಳು, ಸಾರ್ವಜನಿಕರು, ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಲುಷಿತಗೊಂಡ ಈ ಇಂದ್ರಾಣಿ ನದಿಯನ್ನು ಉಳಿಸಬೇಕು, ಶುದ್ದೀಕರಣ ಮಾಡಬೇಕು ಎನ್ನುವ ಸಂಕಲ್ಪದೊಂದಿಗೆ ಉಡುಪಿಯಲ್ಲಿ ಸಮಾನ ಮನಸ್ಕರ ತಂಡವೊಂದು ಸಿದ್ಧಗೊಂಡಿದೆ.ಈ ಮೂಲಕ ಇಂದ್ರಾಣಿ ಉಳಿಸಿ ಅಭಿಯಾನ ಉಡುಪಿಯಲ್ಲಿ ಆರಂಭಗೊಂಡಿದೆ.

 ನದಿಯನ್ನು ಉಳಿಸಲು ಹೊರಟರು:

 ಉಡುಪಿಯ ಪರಿಸರದ ಕಣ್ಣಿನಂತಿರುವ ಈ ಇಂದ್ರಾಣಿ ನದಿ ಉಳಿಸಲೇ ಬೇಕು ಎಂಬ ದೃಢ ನಿರ್ಧಾರದಿಂದ ಅವಿಭಜಿತ ದ.ಕ ಜಿಲ್ಲೆಗಳ ಸಮಾನ ಮನಸ್ಕ ಪರಿಸರ ಆಸಕ್ತರು, ವಿವಿಧ ಸಂಘ, ಸಂಸ್ಥೆಗಳು, ವಿಜ್ಞಾನಿಗಳು, ಸಂಶೋಧಕರು, ಶಿಕ್ಷಕರು, ಉಡುಪಿ ಯುವ ಸಂಘಟನೆಗಳವರು ಈಗ ಒಗ್ಗಟ್ಟಾಗಿದ್ದಾರೆ. ಇನ್ನೇನು ಪೂರ್ಣ ಪ್ರಮಾಣದ ಯೋಚನೆಯೊಂದಿಗೆ ಕಣಕ್ಕಿಳಿದು ನದಿಯನ್ನು ಉಳಿಸಲು ಪಣತೊಟ್ಟಿದ್ದಾರೆ.
ಈಗಾಗಲೇ ಈ ಕುರಿತು ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು, ನದಿ ಉಳಿಸುವ ಹೋರಾಟ, ಯೋಜನೆಗಳ  ಬಗ್ಗೆ  ಇಲ್ಲಿ ಚರ್ಚೆಗಳು ನಡೆಯುತ್ತಿವೆ.

ಜುಲೈ 28ರಂದು ಬೆಳಗ್ಗೆ 9 ಗಂಟೆಗೆ ಇಂದ್ರಾಣಿ ನದಿ ಉಗಮವಾಗುವ ಇಂದ್ರಾಳಿ ದೇವಸ್ಥಾನದ ಬಳಿ ನದಿ ಉಳಿಸುವ ಕುರಿತು ಬೃಹತ್ ಜಾಥಾ ಆರಂಭವಾಗಲಿದೆ.

ಇಂದ್ರಾಣಿ ತೀರ್ಥದ ಬಗ್ಗೆ ಒಂದಿಷ್ಟು:

 ನಗರ ಸಭಾ ವ್ಯಾಪ್ತಿಯ ಇಂದ್ರಾಳಿ ಬಳಿಯಿಂದ ಮೂರು ಝರಿಗಳು ಒಂದಾಗಿ ಬೀಡಿನಗುಡ್ಡೆ, ಕಲ್ಸಂಕ, ಮಠದಬೆಟ್ಟು, ನಿಟ್ಟೂರು, ಕಂಬಳಕಟ್ಟ ಮಾರ್ಗವಾಗಿ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ಹಿಂಭಾಗದಿಂದ ಹರಿದು ಕಲ್ಮಾಡಿಯಲ್ಲಿ ಸಮುದ್ರ ಸೇರುತ್ತಿರುವ ನೀರಿನ ಸೆಲೆ ಈ ಇಂದ್ರಾಣಿ ತೀರ್ಥ. ಈ ನದಿಗೆ ಸಂಬಂಧಿಸಿದ ದಾಖಲೆಗಳು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿದೆ. ಈ ತೀರ್ಥದ ನೀರನ್ನು ಕೆಲವು ವರ್ಷಗಳ ಹಿಂದೆ ಒಂದಿಷ್ಟು ಕುಟುಂಬಗಳು ಬಳಕೆ ಮಾಡುತ್ತಿದ್ದವು. ಇದೇ ನೀರನ್ನು ನಂಬಿಕೊಂಡು ಅನೇಕ ಕುಟುಂಬಗಳು ಕೃಷಿ ಚಟುವಟಿಕೆ ಕೂಡ ಮಾಡುತ್ತಿದ್ದರು. ಆದರೆ ಕೆಲವೇ ಸಮಯದಲ್ಲಿ ಇಂದ್ರಾಣಿ ತ್ಯಾಜ್ಯಗಳಿಂದ ತುಂಬಿಕೊಂಡಿದೆ, ಶುಭ್ರವಾಗಿ ಹರಿಯುತ್ತಿದ್ದ ಇಂದ್ರಾಣಿ ತೀರ್ಥ ಹರಿಯುವ ತೋಡಿನಲ್ಲಿ ಇಂದು ನಗರಸಭೆ ಒಳಚರಂಡಿ ನೀರು ಹರಿಯುತ್ತಿದೆ.

ಇಂದ್ರಾಳಿಯಿಂದ ಕಲ್ಮಾಡಿ ತನಕ ಸಾವಿರಾರು ಕುಟುಂಬ ಈ ತೋಡಿನ ಎರಡು ಭಾಗದಲ್ಲಿ ವಾಸವಾಗಿವೆ. ಕಲ್ಸಂಕ ಸಮೀಪಿಸುತ್ತಿದ್ದಂತೆ ಕೊಳಚೆ ನೀರನ್ನು ನೇರವಾಗಿ ಈ ತೋಡಿಗೆ ಬಿಡಲಾಗುತ್ತದೆ. ಒಳಚರಂಡಿ ನೀರು ಕೂಡ ಯಾವುದೇ ಅಡೆ ತಡೆ ಇಲ್ಲದೇ ಈ ತೋಡಿನಲ್ಲಿ ಹರಿದು ಬರುತ್ತಿದೆ.ಒಟ್ಟಾರೆ ಒಂದು ಕಾಲದಲ್ಲಿ ಶುಭ್ರವಾಗಿದ್ದ ನದಿ ಇಂದು ಹರಿಯುವ ತೋಡಿನಂತಾಗಿದೆ.

ನದಿ ಉಳಿಸಿದರೆ ಸಿಗುತ್ತೆ ಜೀವಜಲ:

ಇಂದ್ರಾಣಿ ಮತ್ತೆ ತ್ಯಾಜ್ಯ ಮುಕ್ತವಾಗಿ ಹಿಂದಿನಂತೆಯೇ ತುಂಬಿಕೊಂಡರೆ, ಬೇಸಿಗೆಯಲ್ಲಿ ನಗರದ ಅರ್ಧದಷ್ಟು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗೋದು ಗ್ಯಾರಂಟಿ. ನದಿ ಉಳಿವಿಗಾಗಿ ಜನಜಾಗೃತಿ ಜತೆಗೆ ಕಾನೂನಾತ್ಮಕ ಹೋರಾಟ ನಡೆಸಲಿದ್ದೇವೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ನೀಡಲಿದ್ದೇವೆ. ಆಶಯ ಈಡೇರದಿದ್ದಲ್ಲಿ ನಮ್ಮ ನಡೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಹಸಿರು ಪೀಠ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎನ್ನುತ್ತಾರೆ ಇಂದ್ರಾಳಿ ಉಳಿಸಿ ಅಭಿಯಾನ ಸಂಚಾಲಕ ಶ್ರೀಕಾಂತ್ ಶೆಟ್ಟಿ.

ಒಟ್ಟಾರೆ  ತ್ಯಾಜ್ಯಮಯವಾಗಿರುವ ನದಿಯನ್ನು ಈ ಯುವ ತಂಡ ಶುದ್ದೀಕರಣ ಮಾಡಲು ಹೊರಟಿರುವುದು ಸಂತಸದ ಸಂಗತಿ. ನದಿ ಉಳಿದರೆ ಇಡೀ ಊರು ಉಳಿಯುತ್ತದೆ ಎನ್ನುವ ನಂಬಿಕೆಯಲ್ಲಿ ಚಂದದ್ದೊಂದು ಕಾರ್ಯಕ್ಕೆ ಸಿದ್ಧವಾಗಿರುವ ತಂಡದ ಜೊತೆ ನೀವೂ ಕೈ ಜೋಡಿಸಿ.