ಇದೀಗ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಟೆಂಟ್ ಸಿನಿಮಾದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಮರ್ಥ್ ನಾಗರಾಜ್ ಈ ಮುಟ್ಟಿನ ಬಗ್ಗೆ ಕಿರುಚಿತ್ರ ಮಾಡಿದ್ದಾರೆ. 22 ನಿಮಿಷಗಳ ಈ ಶಾರ್ಟ್ ಫಿಲ್ಮ್ಗೆ ‘ಋತು’ವಿನ ಜೊತೆ ‘ಬದಲಾಗಬೇಕು’ ಎಂಬ ಅಡಿಬರಹವಿದೆ. ಇತ್ತೀಚೆಗೆ ಈ ಕಿರುಚಿತ್ರದ ಪ್ರದರ್ಶನ ಮಾಡಲಾಗಿದ್ದು, ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟಿ ಮಯೂರಿ ಖ್ಯಾತರಿ ಹಾಗೂ ನಿರ್ದೇಶಕ ಶೂನ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದು ಸಿನಿ ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ. ಕಾಲ ಎಷ್ಟೇ ಮುಂದುವರೆದಿದ್ದರೂ ಕೂಡ ಇನ್ನೂ ಕೆಲವು ವಿಚಾರಗಳ ಬಗ್ಗೆ, ಆಚರಣೆಗಳ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯಿದೆ. ಅದರಲ್ಲಿ ಸ್ತ್ರೀಯರ ದೇಹದಲ್ಲಿ ತಿಂಗಳಿಗೊಮ್ಮೆ ಆಗುವ ಪಕೃತಿ ಸಹಜವಾದ ಮುಟ್ಟು ಕೂಡ ಒಂದು.ಸ್ಯಾಂಡಲ್ವುಡ್ನಲ್ಲಿ ಅದ್ಧೂರಿ ಮೇಕಿಂಗ್ ಸಿನಿಮಾಗಳ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಕಿರುಚಿತ್ರಗಳು ಕೂಡ ಬರುತ್ತಿವೆ.
ಸ್ತ್ರೀಯರ ದೇಹದಲ್ಲಿ ತಿಂಗಳಿಗೊಮ್ಮೆ ಆಗುವ ಪಕೃತಿ ಸಹಜವಾದ ಮುಟ್ಟನ್ನು ಕಥಾವಸ್ತುವಾಗಿ ಇಟ್ಟುಕೊಂಡು ನಿರ್ದೇಶಕ ಸಮರ್ಥ್ ನಾಗರಾಜ್ ‘ಋತು’ ಎಂಬ ಕಿರುಚಿತ್ರ ಮಾಡಿದ್ದಾರೆ.
ನಂತರ ನಿರ್ದೇಶಕ ಸಮರ್ಥ್ ನಾಗರಾಜ್ ಮಾತನಾಡಿ, “ನಾನು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಲ್ಲಿ ಸಾಕಷ್ಟು ಕಲಿತಿದ್ದೇನೆ. ಆ ಕಲಿಕೆಯೇ ಈ ಕಿರುಚಿತ್ರ ಮಾಡಲು ಕಾರಣ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥೆಯಿದು. ಪಿರಿಯಡ್ಸ್ ಎಂದರೆ ಒಂದು ಸಮಸ್ಯೆ ಅಂದುಕೊಂಡಿರುವವರು ಬಹಳ ಜನರಿದ್ದಾರೆ. ನಮ್ಮ ಈ ಪ್ರಯತ್ನದಿಂದ ಇದು ಸಮಸ್ಯೆಯಲ್ಲ. “ಮುಟ್ಟು ಮುಟ್ಟೆಂದೇಕೆ ಕೀಳಾಗಿ ಕಾಣುವಿರಿ, ಮುಟ್ಟಲ್ಲವೆ ಸೃಷ್ಟಿಯಾ ಹುಟ್ಟು. ಮುಟ್ಟು ಮುಟ್ಟೆಂದೇಕೆ ಮುಟ್ಟಾಳರಂತೆ ಆಡುವಿರಿ ಮುಟ್ಟಲ್ಲವೇ ನಮ್ಮೆಲರ ಹುಟ್ಟಿನ ಗುಟ್ಟು” ಎಂಬ ಉತ್ತಮ ಸಂದೇಶವನ್ನು ಸಾರಿದ್ದೇವೆ. ಕಿರುಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನನ್ನ ಇಡೀ ತಂಡಕ್ಕೆ, ನಿರ್ಮಾಣ ಮಾಡಿದ ನನ್ನ ತಂದೆ ನಾಗರಾಜ್ ಅವರಿಗೆ ಕೃತಜ್ಞತೆ” ತಿಳಿಸಿದರು.
ಮೊದಲು ಋತು ಕಿರುಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, “ನಾವು ಒಂದು ಕಡೆ ಚಂದ್ರಯಾನಕ್ಕೆ ಸಜ್ಜಾಗಿದ್ದೇವೆ. ಮತ್ತೊಂದು ಕಡೆ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಹೆಚ್ಚಾಗಿ ಹಳ್ಳಿ ಹಾಗೂ ನಗರದ ಕೆಲವು ಬಡಾವಣೆಗಳಲ್ಲಿ ಇದರ ಬಗ್ಗೆ ಅರಿವಿಲ್ಲದ ಜನ ಹೆಚ್ಚಿದ್ದಾರೆ. ಇಂದು ಹಳ್ಳಿಗಳಲ್ಲಿ ಮೂರು ವೈನ್ ಸ್ಟೋರ್ಗಳಿರುತ್ತದೆ. ಅಜ್ಜ ಅಜ್ಜಿಯರ ಕೈಯಲ್ಲೂ ಮೊಬೈಲ್ ಇರುತ್ತದೆ. ಆದರೆ ಸರಿಯಾದ ಶೌಚಾಲಯ ಇರುವುದಿಲ್ಲ. ನಾವು ಇನ್ನೂ ಸಾಕಷ್ಟು ಬದಲಾಗಬೇಕು ಎಂಬುದನ್ನು ಸಮರ್ಥ್ ಈ ಕಿರುಚಿತ್ರದ ಮೂಲಕ ಸಮರ್ಥವಾಗಿ ತೋರಿಸಿದ್ದಾರೆ” ಎಂದು ಹೇಳಿದರು.
ಈ ಕಿರುಚಿತ್ರದಲ್ಲಿ ಜೊತೆಜೊತೆಯಲಿ ಧಾರಾವಾಹಿ ಖ್ಯಾತಿಯ ಅಪೂರ್ವ, ಸಿಂಚನ ಶಿವಣ್ಣ ಮುಂತಾದವರು ಅಭಿನಯಿಸಿದ್ದಾರೆ. ಈ ಕಿರುಚಿತ್ರ ಎನ್ ಆರ್ ಎಸ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನಲ್ನಲ್ಲಿ ನೋಡಲು ಲಭ್ಯವಿದೆ. ಋತು ಮುಟ್ಟಿನ ಬಗ್ಗೆ ಒಂದು ಮನಮುಟ್ಟುವ ಕಿರುಚಿತ್ರವಾಗಿದೆ.ಬಳಿಕ ನಟಿ ಮಯೂರಿ ಮಾತನಾಡಿ, “ಪ್ರಕೃತಿಯ ಸಹಜ ಗುಣದ ಬಗ್ಗೆ ಈ ಕಿರುಚಿತ್ರವನ್ನು ಮಾಡಲಾಗಿದೆ. ಬಹಳ ಚೆನ್ನಾಗಿ ಮೂಡಿ ಬಂದಿದೆ. ಋತು ಎಂಬ ಪದವೇ ಬಹಳ ಅದ್ಭುತವಾಗಿದೆ. ಹೆಣ್ಣುಮಕ್ಕಳು ಈ ಋತು ಸಮಯದಲ್ಲಿ ಅನುಭವಿಸುವ ನೋವು ಯಾರಿಗೂ ಹೇಳೋದಿಕ್ಕೆ ಆಗೋಲ್ಲ” ಎಂದು ಮುಟ್ಟಿನ ಬಗ್ಗೆ ಮನಬಿಚ್ಚಿ ಮಾತನಾಡುವುದರ ಜೊತೆಗೆ ಕಿರುಚಿತ್ರತಂಡದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.