ಬಾಲಿವುಡ್ ಬೇಡ ಕನ್ನಡ ಮಾತ್ರ ಸಾಕು; ಕನ್ನಡ ನನ್ನ ಕರ್ಮಭೂಮಿ: ರಿಷಭ್ ಶೆಟ್ಟಿ

ಟೈಮ್ಸ್ ನೌ ಶೃಂಗಸಭೆ 2022 ರಲ್ಲಿ ಹಿಂದಿ ಚಿತ್ರ ನಟ ಅನುಪಮ್ ಖೇರ್, ಕನ್ನಡ ನಟ ರಿಷಭ್ ಶೆಟ್ಟಿ ನಡುವೆ ಲೇಖಕ ಚೇತನ್ ಭಗತ್ ಸಂವಾದವೇರ್ಪಡಿಸಿದ್ದಾರೆ. ಟೈಮ್ಸ್ ನೌ ಶೃಂಗಸಭೆಯ ಹಿಂದಿನ ಆವೃತ್ತಿಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ, ಪೀಟರ್ ಝೈಹಾನ್, ಕೆ ಶಿವನ್ ಮತ್ತು ಶ್ರೀ ರವಿಶಂಕರ್ ಮುಂತಾದವರು ಭಾಗವಹಿಸಿದ್ದಾರೆ.

ಈ ಬರಿ ಹಿಂದಿ ಚಿತ್ರನಟ ಮತ್ತು ಕನ್ನಡದ ನಟ-ನಿರ್ದೇಶಕ ರಿಷಭ್ ಶೆಟ್ಟಿ ಮಧ್ಯೆ ಸಂವಾದವೇರ್ಪಡಿಸಲಾಗಿತ್ತು. ಕಾರ್ಯಕ್ರಮದ ಸಂವಾದದಲ್ಲಿ ಚೇತನ್ ಭಗತ್ ಪ್ರಶ್ನೆ ಕೇಳುತ್ತಾ, ಹಿಂದಿ ಸಿನಿಮಾದಲ್ಲಿ ಕೆಲಸ ಮಾಡಲು ಬಯಸುತ್ತೀರಾ ಎಂದಾಗ ಒಂದು ಕ್ಷಣವೂ ತಡಮಾಡದೆ ಉತ್ತರಿಸಿದ ರಿಷಭ್ ಶೆಟ್ಟಿ, “ಇಲ್ಲ ನನಗೆ ಕನ್ನಡ ಚಿತ್ರಗಳನ್ನು ಮಾಡಬೇಕು, ಏಕೆಂದರೆ ಒಬ್ಬ ನಟ ನಿರ್ದೇಶಕ ಮತ್ತು ಬರಹಗಾರನಾಗಲು ವೇದಿಕೆ ಒದಗಿಸಿದ್ದು ಕನ್ನಡ ಚಿತ್ರರಂಗ. ಇವತ್ತು ನಾನು ಇಲ್ಲಿದ್ದರೆ, ಕಾಂತಾರವನ್ನು ನಾನು ಮಾಡಿದ್ದರೆ ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಚಿತ್ರರಂಗ ಕಾರಣ ಆದ್ದರಿಂದ ನನಗೆ ಕನ್ನಡ ಚಿತ್ರಗಳನ್ನು ಮಾಡಬೇಕು. ಕನ್ನಡ ಚಿತ್ರಗಳನ್ನು ಉಳಿದ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಬಹುದು. ಆದರೆ, ಈಗ ಭಾಷೆಗಳ ಮಿತಿ ಇಲ್ಲ, ಜನರು ಪ್ರತಿ ಸ್ಥಳೀಯ ವಿಷಯಗಳನ್ನು ಇದ್ದ ರೀತಿಯಲ್ಲಿಯೇ ಸ್ವೀಕರಿಸುತ್ತಿದ್ದಾರೆ. ನಾನು ಎಲ್ಲಿಂದ ಬಂದಿದ್ದೇನೋ ಅದು ನನ್ನ ಕರ್ಮಭೂಮಿಯಾಗಿದೆ, ಮತ್ತು ನಾನು ಅಲ್ಲೇ ಕೆಲಸ ಮಾಡಲು ಬಯಸುತ್ತೇನೆ” ಎಂದು ದೃಢವಾಗಿ ನುಡಿದರು. ಇದಕ್ಕೆ ಪ್ರತಿಯಾಗಿ ಅನುಪಮ್ ಖೇರ್ ನಾನು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ಬಯಸಿದರೆ ಕೆಲಸ ಮಾಡಬಹುದಲ್ಲಾ ಎಂದು ಕೇಳಿದಾಗ ಖಂಡಿತವಾಗಿ ಎಂದು ರಿಷಭ್ ಉತ್ತರಿಸಿದರು.

ಕೋವಿಡ್ ಮಹಾಮಾರಿಯ ನಂತರ ಬೇರುಗಳನ್ನು ಹೊಂದಿರುವ ಕಥೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ವಾಣಿಜ್ಯ ಚಿತ್ರಗಳು ಯಾವಾಗಲೂ ಪಾಶ್ಚಿಮಾತ್ಯ ಸಿನಿಮಾಗಳಿಂದ ಪ್ರಭಾವಿತವಾಗಿವೆ, ಆದರೆ ಜನರು ತಮ್ಮ ಬೇರಿನ ಕಥೆಗಳನ್ನು ಬಯಸುತ್ತಾರೆ. ಕಾಂತಾರದಲ್ಲಿ, ನಾನು ನನ್ನ ಹಳ್ಳಿಯ ಕಥೆಯನ್ನು ಹೇಳಿದೆ, ಭಾರತದ ಪ್ರತಿಯೊಂದು ಹಳ್ಳಿಯು ಅಂತಹ ಕಥೆಗಳನ್ನು ಹೊಂದಿದೆ. ದಕ್ಷಿಣ ಕೆಲಸ ಮಾಡುತ್ತಿದೆ ಹಿಂದಿ ಕೆಲಸ ಮಾಡುತ್ತಿಲ್ಲ ಎಂದಲ್ಲ. ನೀವು ಕಾಶ್ಮೀರ ಫೈಲ್‌ ಅನ್ನು ಏನೆಂದು ಕರೆಯುತ್ತೀರಿ? ಎಂದು ಅವರು ಪ್ರಶ್ನಿಸಿದರು. ಅನುಪಮ್ ಖೇರ್ ನಟನೆಯ ಕಾಶ್ಮೀರ್ ಫೈಲ್ಸ್ ಮತ್ತು ಕಾರ್ತಿಕೇಯನ್ 2 ಚಿತ್ರ ಯಶಸ್ಸು ಕಂಡಿದೆ.

ಬಾಲಿವುಡ್ ಎನ್ನುವ ಹಿಂದಿ ಚಿತ್ರರಂಗದಲ್ಲಿ ಪ್ರತಿಯೊಬ್ಬರೂ ಒಂದು ಸಣ್ಣ ಪಾತ್ರ ಸಿಕ್ಕರೂ ಜೀವನದ ಮಹಾಭಾಗ್ಯ ಎಂದುಕೊಳ್ಳುತ್ತಾರೆ ಅದಕ್ಕೆ ವಿಪರೀತವಾಗಿ ಬಾಲಿವುಡ್ ಬೇಡವೆ ಬೇಡ ಕೇವಲ ಕನ್ನಡ ಮಾತ್ರ ಸಾಕು ಎನ್ನುವ ಮೂಲಕ ರಿಷಭ್ ದಿಟ್ಟತನ ತೋರಿದ್ದಾರೆ. ಇದು ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಕಾಲದಲ್ಲಿ ದಕ್ಷಿಣದವರು ಬಾಲಿವುಡ್ ನಲ್ಲಿ ನಟಿಸಲು ಹಾತೊರೆಯುತ್ತಿದ್ದರು ಆದರೆ ಈಗ ಬಾಲಿವುಡ್ ನಟರು ದಕ್ಷಿಣದ ಚಲನಚಿತ್ರಗಳಲ್ಲಿ ನಟಿಸಲು ಹಾತೊರೆಯುತ್ತಿದ್ದಾರೆ. ಬಾಹುಬಲಿ, ಕೆಜಿಎಫ್, ಆರ್.ಆರ್.ಆರ್, ಗರುಡ ಗಮನ ವೃಷಭ ವಾಹನ, ಚಾರ್ಲಿ, ಕಾಂತಾರ, ಪುಷ್ಪ, ದೃಶ್ಯಂ , ಸೈರಾಟ್ ನಂತಹ ಚಿತ್ರಗಳು ಭಾಷೆ, ಗಡಿ, ದೇಶದ ಗಡಿ ದಾಟಿ ಯಶಸ್ಸು ಸಾಧಿಸುತ್ತಿರುವುದೆ ಇದಕ್ಕೆ ಕಾರಣ.