ರಿಕ್ಷಾದಲ್ಲಿ ಬಿಟ್ಟು ಹೋದ ಕ್ಯಾಮರಾ ಮರಳಿಸಿದ ಕೋಟೇಶ್ವರದ ರಿಕ್ಷಾ ಚಾಲಕ: ಸುದ್ದಿಯಾಯ್ತು ಕೋಟೇಶ್ವರ ರಿಕ್ಷಾ ಚಾಲಕರ ಪ್ರಾಮಾಣಿಕತೆ

ಕುಂದಾಪುರ : ಬೆಂಗಳೂರಿನಿಂದ ಕಾರ್ಯ ನಿಮಿತ್ತ ಕೋಟೇಶ್ವರಕ್ಕೆ ಬಂದಿಳಿದಿದ್ದ ಇಬ್ಬರು ಯುವಕರು ಬಿಟ್ಟು ಹೋಗಿದ್ದ ಬೆಲೆ ಬಾಳುವ ಕ್ಯಾಮರಾವನ್ನು ಅವರಿಗೆ ಹಿಂತಿರುಗಿಸುವ ಮೂಲಕ ಕೋಟೇಶ್ವರದ ಬಂಡಿಕಡು ಶ್ರೀಧರ ಎನ್ನುವ ರಿಕ್ಷಾ ಚಾಲಕರು ಪ್ರಾಮಾಣಿಕತೆ ತೋರಿದ್ದಾರೆ.

ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದ ಯುವಕರು ಕೋಟೇಶ್ವರಕ್ಕೆ ಬಂದಿದ್ದರು. ಕೋಟೇಶ್ವರದ ರಥಬೀದಿಯ ಚೇತನ ರಿಕ್ಷಾ ನಿಲ್ದಾಣದಲ್ಲಿನ ರಿಕ್ಷಾ ಚಾಲಕ ಬಂಡಿಕಡು ಶ್ರೀಧರ ಎನ್ನುವವರ ರಿಕ್ಷಾದಲ್ಲಿ ಪ್ರಯಾಣಿಸಿದ್ದ ಅವರು  ರಿಕ್ಷಾದಿಂದ ಇಳಿಯುವಾಗ ತಮ್ಮ ಬೆಲೆಬಾಳುವ ಕ್ಯಾಮರಾವನ್ನು ರಿಕ್ಷಾದಲ್ಲೇ ಬಿಟ್ಟು ತೆರಳಿದ್ದರು.

ರಿಕ್ಷಾದಿಂದ ಪ್ರಯಾಣಿಕರು ಇಳಿದು ಹೋದ ಸ್ವಲ್ಪ ಸಮಯದ ಬಳಿಕ ರಿಕ್ಷಾದಲ್ಲಿ ಕ್ಯಾಮರಾ ಇರುವುದನ್ನು ಗಮನಿಸಿ ಶ್ರೀಧರ ಕ್ಯಾಮರಾದ ಕಿಟ್‌ ಪರಿಶೀಲಿದ್ದಾರೆ. ಈ ವೇಳೆ ಮಾಲಕರ ಹೆಸರು ಪತ್ತೆಯಾಗಿದೆ. ಸ್ಥಳೀಯ ಉದ್ಯಮಿ ಸುರೇಶ್ ಜೋಗಿ ಹಾಗೂ ಸಹ ರಿಕ್ಷಾ ಚಾಲಕರ ಸಹಕಾರದಿಂದ ಯುವಕರ ಮೊಬೈಲ್‌ ದೂರವಾಣಿಯ ಮೂಲಕ ಅವರನ್ನು  ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.

ರಿಕ್ಷಾ ನಿಲ್ದಾಣಕ್ಕೆ ಮರಳಿ ಬಂದ ಯುವಕರು 50 ಸಾವಿರಕ್ಕೂ ಹೆಚ್ಚು ಮೌಲ್ಯದ ಕ್ಯಾಮರಾವನ್ನು ಮರಳಿ ಪಡೆದುಕೊಂಡಿದ್ದಾರೆ. ರಿಕ್ಷಾ ಚಾಲಕ ಶ್ರೀಧರ್ ಅವರ ಪ್ರಾಮಾಣಿಕತೆಯನ್ನು ಕೊಂಡಾಡಿದ ಅವರು, ಬಹುಮಾನ ನೀಡಲು ಮುಂದಾದರೂ ಶ್ರೀಧರ್ ನಯವಾಗಿ ನಿರಾಕರಿಸಿದ್ದಾರೆ.

ನೊಂದವರಿಗೆ ಸಹಕರಿಸುವ, ಪರಿಸರದ ಸಮಾಜ ಸೇವೆ ಹಾಗೂ ತುರ್ತು ಸೇವೆಗಳ ಅಗತ್ಯತೆಯನ್ನು ಪೂರೈಸುವ ಮೂಲಕ ಜನಮನ್ನಣೆ ಗಳಿಸಿದ್ದ ಕೋಟೇಶ್ವರ ರಥ ಬೀದಿಯ ಚೇತನಾ ರಿಕ್ಷಾ ನಿಲ್ದಾಣದ ರಿಕ್ಷಾ ಚಾಲಕರು ಇದೀಗ ತಮ್ಮ ಪ್ರಾಮಾಣಿಕ ನಡವಳಿಕೆಯಿಂದ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.