ಕರಾವಳಿಯ ಕಂಬಳ ಮೈಸೂರು ದಸರಾ ವೇದಿಕೆಗೆ! ಅಕ್ಟೋಬರ್ 18 ಮತ್ತು 19ರಂದು ಸುಮಾರು 160 ಜೋಡಿ ಕೋಣಗಳ ಓಟ ನಡೆಯಲಿದೆ. ಸೀನಿಯರ್ ವಿಭಾಗದ ವಿಜೇತರಿಗೆ 16 ಗ್ರಾಂ ಚಿನ್ನ ಸೇರಿ ಬಹುಮಾನ ಸಿಗಲಿದೆ ಎಂದು ಮಾಹಿತಿ ಹೊರಬಿದ್ದಿದೆ.
ಮೈಸೂರು: ಈಗ ಗದ್ದೆಗೆ ಇಳಿಯುತ್ತಿರುವ ಕೋಣಗಳು ಕಾಡುಬೆಟ್ಟು ಶಿವಣ್ಣನವರದ್ದು…! ಇದು ಮೈಸೂರು ಕಂಬಳದ ಕಾಮೆಂಟ್ರಿಯಲ್ಲಿ (Commentary) ಕೇಳಿಬಂದರೆ ಅಚ್ಚರಿ ಪಡಬೇಡಿ; ಯಾಕಂದ್ರೆ ನಮ್ಮ ಡಿವೈನ್ ಸ್ಟಾರ್ ಮೈಸೂರು ಕಂಬಳ ಉದ್ಘಾಟನೆಗೆ ಬರ್ತಾರಂತೆ ಕಣ್ರೀ! ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವಕ್ಕೆ ಈ ಬಾರಿ ಕರಾವಳಿಯ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳ ಹೊಸ ಮೆರುಗು ನೀಡಲಿದೆ. ದಸರಾ ಇತಿಹಾಸದಲ್ಲಿ ಮೊದಲ ಬಾರಿಗೆ ಅಕ್ಟೋಬರ್ 18 ಮತ್ತು 19ರಂದು ಮೈಸೂರಿನಲ್ಲಿ ಕಂಬಳ ಆಯೋಜಿಸಲಾಗಿದ್ದು, ಕರಾವಳಿ ಕರ್ನಾಟಕದ ಸುಮಾರು 160 ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅಧಿಕೃತ ದಸರಾ ಕಂಬಳ ವೆಬ್‌ಸೈಟ್‌ನಲ್ಲೂ ಇದೇ ಎರಡು ದಿನಗಳ ಕಾರ್ಯಕ್ರಮವನ್ನು ಪ್ರಕಟಿಸಲಾಗಿದೆ.
150 ಮೀಟರ್ ಉದ್ದದ ಗದ್ದೆ
ಮೈಸೂರು ದಸರಾ ಕಂಬಳಕ್ಕಾಗಿ ಸತಘಳ್ಳಿಯ ಸಮೀಪದ ವಿಟಿಯು ಕಾಲೇಜು ಬಳಿಯಲ್ಲಿ 150 ಮೀಟರ್‌ಗಿಂತ ಹೆಚ್ಚು ಉದ್ದದ ಕಂಬಳದ ಕೆಸರುಗದ್ದೆ ಟ್ರ್ಯಾಕ್ ಸಿದ್ಧಪಡಿಸಲಾಗುತ್ತಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಟ್ರ್ಯಾಕ್ ಉದ್ದವನ್ನು ಸುಮಾರು 150 ಮೀಟರ್ ಎಂದು ಉಲ್ಲೇಖಿಸಲಾಗಿದೆ. ಸ್ಥಳದಲ್ಲಿ ಸುಮಾರು 15,000 ಪ್ರೇಕ್ಷಕರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ.















