ವಿಹಿಂಪ ಮೆರವಣಿಗೆ ಮೇಲೆ ಕಲ್ಲು ತೂರಾಟ: ಹರ್ಯಾಣದಲ್ಲಿ ಹಿಂಸಾಚಾರ; ನಿಷೇಧಾಜ್ಞೆ ಜಾರಿ

ಚಂಡಿಗಢ: ಹರ್ಯಾಣದ ನುಹ್ ಜಿಲ್ಲೆಯಲ್ಲಿ ಜನಸಮೂಹವೊಂದು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು, ಕಲ್ಲು ತೂರಾಟ ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದ ಕಾರಣ ಇಬ್ಬರು ಹೋಮ್ ಗಾರ್ಡ್‌ಗಳು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಪೊಲೀಸರು ಸೇರಿದಂತೆ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡು ಹಾರಿಸಲಾಯಿತು. ಜನಸಮೂಹ ವಿಶ್ವ ಹಿಂದೂ ಪರಿಷತ್ ಮೆರವಣಿಗೆಯನ್ನು ತಡೆಯಲು ಪ್ರಯತ್ನಿಸಿದಾಗ ಗಲಭೆ ಭುಗಿಲೆದ್ದಿತು, ಕಲ್ಲು ತೂರಾಟ ಮತ್ತು ಕಾರುಗಳಿಗೆ ಬೆಂಕಿ ಹಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಹಚ್ಚಲ್ಪಟ್ಟ ವಾಹನಗಳು ಮೆರವಣಿಗೆಯ ಭಾಗವಾಗಿದ್ದವು ಅಥವಾ ಅವರಿಗೆ ಸೇರಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವೀಡಿಯೊ ಕ್ಲಿಪ್ ನಲ್ಲಿ ಕನಿಷ್ಠ ನಾಲ್ಕು ಕಾರುಗಳಿಗೆ ಬೆಂಕಿ ತಗಲಿರುವುದು ಗೋಚರಿಸಿದೆ. ಮತ್ತೊಂದು ವೀಡಿಯೊದಲ್ಲಿ ಎರಡು ಹಾನಿಗೊಳಗಾದ ಪೊಲೀಸ್ ಕಾರುಗಳು ಮತ್ತು ಗುಂಡಿನ ಸದ್ದು ಕೇಳಿಬಂದಿದೆ.

ಪೊಲೀಸರ ಪ್ರಕಾರ, ಸೋಮವಾರ ವಿಎಚ್‌ಪಿಯ ‘ಬ್ರಿಜ್ ಮಂಡಲ ಜಲಾಭಿಷೇಕ ಯಾತ್ರೆ’ಯನ್ನು ಯುವಕರ ಗುಂಪೊಂದು ನುಹ್‌ನ ಖೇಡ್ಲಾ ಮೋಡ್ ಬಳಿ ತಡೆದು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿತು. ನಂತರ ಕಾರುಗಳಿಗೆ ಬೆಂಕಿ ಹಚ್ಚಲಾಯಿತು. ಮೆರವಣಿಗೆಯಲ್ಲಿದ್ದ ಜನರು ಅವರನ್ನು ತಡೆದ ಯುವಕರ ಮೇಲೆ ಕಲ್ಲು ತೂರಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅನೇಕರು ಹತ್ತಿರದ ದೇವಸ್ಥಾನದಲ್ಲಿ ಆಶ್ರಯ ಪಡೆದರು. ಬಳಿಕ ಅವರನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು ಎಂದು ವರದಿ ತಿಳಿಸಿದೆ.

ನುಹ್‌ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ ಹರಿಯಾಣ ಸರ್ಕಾರವು ಪ್ರದೇಶದಲ್ಲಿ “ತೀವ್ರ ಕೋಮು ಉದ್ವಿಗ್ನತೆ” ಇದೆ ಎಂದು ಹೇಳಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರದಿಂದ 20 ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ಒಂದು ವಾರದವರೆಗೆ ರಾಜ್ಯದಲ್ಲಿ ನಿಯೋಜಿಸುವಂತೆ ಸರ್ಕಾರ ಕೋರಿದೆ.

ನೆರೆಯ ಗುರುಗ್ರಾಮ್ ಜಿಲ್ಲೆಯ ಸೋಹ್ನಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದರಿಂದ ಕೇಂದ್ರ ಗೃಹ ಸಚಿವಾಲಯವು 15 ಕೇಂದ್ರ ಪಡೆಯ ತುಕುಡಿಗಳನ್ನು ಹರಿಯಾಣಕ್ಕೆ ರವಾನಿಸಿದೆ.

ನುಹ್ ಮತ್ತು ಗುರುಗ್ರಾಮ್ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಪರಿಸ್ಥಿತಿ “ನಿಯಂತ್ರಣದಲ್ಲಿದೆ” ಎಂದು ನುಹ್ ಅಧಿಕಾರಿಗಳು ಹೇಳಿದ್ದಾರೆ. ಎರಡೂ ಸಮುದಾಯಗಳ ಪ್ರತಿನಿಧಿಗಳು ಸಭೆಯಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.