ಉಡುಪಿ: ಹೆಜಮಾಡಿ ಟೋಲ್ ಗೇಟ್‌ನಲ್ಲಿ ಟೋಲ್ ಶುಲ್ಕ ಪರಿಷ್ಕರಣೆ ಕುರಿತು ಸ್ಪಷ್ಟನೆ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆಯಂತೆ ಸುರತ್ಕಲ್ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಗೇಟ್‌ನೊಂದಿಗೆ ವಿಲೀನಗೊಳಿಸಲಾಗಿದೆ. ಪರಿಷ್ಕೃತ ಟೋಲ್ ಶುಲ್ಕವನ್ನು ಜಾರಿಗೊಳಿಸುವ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಎನ್‌ಎಚ್‌ಎಐ ಮನವಿ ಮೇರೆಗೆ ಹೆಜಮಾಡಿ ಟೋಲ್‌ಗೇಟ್‌ಗೆ ಸೂಕ್ತ ಭದ್ರತೆ ಒದಗಿಸಿದ್ದೇವೆ ಎಂದಿದ್ದಾರೆ.
ಟೋಲ್ ಶುಲ್ಕ ಹೆಚ್ಚಳಕ್ಕೆ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಶೀಘ್ರದಲ್ಲೇ ಸಭೆ ಕರೆಯಲಾಗುವುದು. ಸಾರ್ವಜನಿಕರಿಂದ ಅಥವಾ ಇತರ ಸಂಸ್ಥೆಗಳಿಂದ ಇದುವರೆಗೆ ಯಾವುದೇ ಆಕ್ಷೇಪಣೆಯನ್ನು ಸ್ವೀಕರಿಸಲಾಗಿಲ್ಲ. ಹಾಗೇನಾದರೂ ಆಕ್ಷೇಪಣೆಗಳಿದ್ದಲ್ಲಿ ಕೂಲಂಕಷವಾಗಿ ಪರಿಶೀಲಿಸುತ್ತೇವೆ. ಪರಿಷ್ಕೃತ ಟೋಲ್ ಶುಲ್ಕ ಯಾವಾಗ ಪ್ರಾರಂಭವಾಗುತ್ತದೆ ಎನ್ನುವುದನ್ನು ಹೆದ್ದಾರಿ ಪ್ರಾಧಿಕಾರವು ಜಿಲ್ಲಾಡಳಿತಕ್ಕೆ ತಿಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾ ಎಸ್ಪಿ ಹಕೆ ಅಕ್ಷಯ್ ಮಚ್ಚಿಂದ್ರ ಈ ಬಗ್ಗೆ ಪ್ರತಿಕ್ರಿಯಿಸಿ, ಟೋಲ್ ಗೇಟ್ ವಿರೋಧಿ ಸಮಿತಿ ಪ್ರತಿಭಟನೆಗೆ ಕರೆ ನೀಡಿರುವ ಮಾಹಿತಿ ಸಿಕ್ಕಿದೆ. ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಿದರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಹೆದ್ದಾರಿ ಮುಚ್ಚಿದರೆ ಅಥವಾ ಆಸ್ತಿಪಾಸ್ತಿಗೆ ಹಾನಿಯಾದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಈಗಾಗಲೇ ಕಾಪು ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿ ಸೂಚನೆ ನೀಡಲಾಗಿದೆ ಎಂದಿದ್ದಾರೆ.