ಅಕ್ರಮ ಸಕ್ರಮ ಸರಾಗ ಪ್ರಕ್ರಿಯೆಗೆ ಬಗರ್ ಹುಕುಂ ಆ್ಯಪ್‌ ಬಿಡುಗಡೆ ಮಾಡಿದ ಕಂದಾಯ ಇಲಾಖೆ

ಬೆಂಗಳೂರು: ಕೃಷಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಬಗರ್ ಹುಕುಂ ಆ್ಯಪ್‌ ಬಿಡುಗಡೆ ಮಾಡಿದೆ. ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದಕ್ಕೆ ಸರ್ಕಾರ ಬಗರ್ ಹುಕುಂ ಆ್ಯಪ್ ರೂಪಿಸಿದೆ.

ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಅಲ್ಲದೆ, ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ಭೇಟಿ ನೀಡಿ ಕೃಷಿ ಬಗ್ಗೆ ಪರಿಶೀಲಿಸುವುದು ಸಾಧ್ಯವಿಲ್ಲ. ಹೀಗಾಗಿ ಬಗರ್ ಹುಕುಂ ತಂತ್ರಾಶ ಬಳಸಿ ಅರ್ಜಿ ವಿಲೇ ಮಾಡಲಾಗುತ್ತದೆ ಎಂದರು.

ಬಗರ್ ಹುಕುಂ ತಂತ್ರಾಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದಕ್ಕೆ ಹಾಗೂ ಅರ್ಜಿಗಳ ಶೀಘ್ರ ಪರಿಶೀಲನೆ ಪ್ರಕ್ರಿಯೆಗೂ ಈ ಆ್ಯಪ್ ಸಹಕಾರಿಯಾಗಲಿದೆ.

ಗ್ರಾಮ ಲೆಕ್ಕಿಗ ಸ್ಥಳಕ್ಕೆ ತೆರಳಿ ಈ ಆ್ಯಪ್ ಮೂಲಕ ಜಿಯೋ ಫೆನ್ಸ್ ಮಾಡಿ ಆ ಮಾಹಿತಿಯನ್ನು ಕಂದಾಯ ನಿರೀಕ್ಷಕ ಹಾಗೂ ಸರ್ವೇ ಇಲಾಖೆಗಳ ಲಾಗಿನ್‌ಗೆ ಕಳುಹಿಸುತ್ತಾರೆ. ಇದರ ಸಹಾಯದಿಂದ ತಹಶೀಲ್ದಾರ್‌ ಸ್ಯಾಟಲೈಟ್ ಇಮೇಜ್ ಪಡೆದು ಅಲ್ಲಿ ಕೃಷಿ ನಡೆಸುತ್ತಿರುವ ಬಗ್ಗೆ ಮಾಹಿತಿ ಕಲೆಹಾಕುತ್ತಾರೆ. ಅಲ್ಲದೆ ಆ ಇಮೇಜ್ ಜೊತೆಗೆ ಎಲ್ಲಾ ಮಾಹಿತಿಯನ್ನು ಬಗರ್ ಹುಕುಂ ಕಮಿಟಿ ಮುಂದೆ ಸಲ್ಲಿಸಿ ಓಟಿಪಿ ಮೂಲಕ ಕೆವೈಸಿ ಮಾಡುವ ಮೂಲಕ ಋಜುವಾತು ಮಾಡುತ್ತಾರೆ. ಈ ಮೂಲಕ ಅಕ್ರಮ ಸಕ್ರಮ ಆಗುವುದಲ್ಲದೇ ಅಧಿಕಾರಿಗಳ ಕೆಲಸವೂ ಸುಲಭವಾಗಲಿದ್ದು ಸಾಗುವಳಿದಾರರಿಗೂ ಸಹಾಯ ಆಗಲಿದೆ ಎಂದು ಸಚಿವರು ತಿಳಿಸಿದರು.