ತೆಲಂಗಾಣದ ಮೊದಲ ಕಾಂಗ್ರೆಸ್ ಸಿಎಂ ಆಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ

ಹೈದರಾಬಾದ್: ಹೈದರಾಬಾದ್‌ನ ಎಲ್ ಬಿ ಸ್ಟೇಡಿಯಂನಲ್ಲಿ ತೆಲಂಗಾಣದ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಎ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಡಾ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧಿಸಿದರು. ಮಲ್ಲು ಭಟ್ಟಿ ವಿಕ್ರಮಾರ್ಕ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇವರ ಜೊತೆಗೆ ಎನ್ ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಪೊನ್ನಂ ಪ್ರಭಾಕರ್, ದಾಸರಿ ಅನಸೂಯಾ, ದಾಮೋದರ ರಾಜ ನರಸಿಂಹ, ಡಿ ಶ್ರೀಧರ್ ಬಾಬು, ತುಮ್ಮಲ ನಾಗೇಶ್ವರ ರಾವ್, ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, ಕೊಂಡ ಸುರೇಖಾ, ಜೂಪಲ್ಲಿ ಕೃಷ್ಣ ರಾವ್ ಅವರೂ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕ ಡಿಸಿಎಂ ಡಿ ಕೆ ಶಿವಕುಮಾರ್ ಹಾಜರಿದ್ದರು.

ತೆಲಂಗಾಣದಲ್ಲಿ 119 ಸ್ಥಾನಗಳಲ್ಲಿ 64 ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಪಕ್ಷವು ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯನ್ನು ಸೋಲಿಸಿ ಗದ್ದುಗೆ ಏರಿದೆ.

ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶ್ರೀ ರೇವಂತ್ ರೆಡ್ಡಿ ಅವರಿಗೆ ಅಭಿನಂದನೆಗಳು. ರಾಜ್ಯದ ಪ್ರಗತಿ ಮತ್ತು ಅದರ ನಾಗರಿಕರ ಕಲ್ಯಾಣಕ್ಕಾಗಿ ನಾನು ಸಾಧ್ಯವಿರುವ ಎಲ್ಲ ಬೆಂಬಲದ ಭರವಸೆ ನೀಡುತ್ತೇನೆ ಎಂದು ಪ್ರಧಾನಿ ಮೋದಿ X ನಲ್ಲಿ ಅಭಿನಂದನೆ ವ್ಯಕ್ತಪಡಿಸಿದ್ದಾರೆ.