ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರ ಅವರಿಗೆ ಡಿ. ದೇವರಾಜ ಅರಸು ಪ್ರಶಸ್ತಿ

ಉಡುಪಿ : ಜಿಲ್ಲಾ ಮಟ್ಟದ ಪ್ರಥಮ ಡಿ. ದೇವರಾಜ ಅರಸು ಪ್ರಶಸ್ತಿಗೆ ಮಲ್ಪೆ ರಾಘವೇಂದ್ರ ಅವರು ಆಯ್ಕೆಯಾಗಿರುತ್ತಾರೆ. ಇವರಿಗೆ ಆ. 20 ರಂದು ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಡಿ.ದೇವರಾಜ ಅರಸು ರವರ 107 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನಗದು ಹಾಗೂ ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಚಲನಚಿತ್ರ, ಸಾಹಿತ್ಯ, ಯಕ್ಷಗಾನ ಹೀಗೆ ಹಲವಾರು ಕ್ಷೇತ್ರದಲ್ಲಿ ದುಡಿದ ಇವರು, ಕಾಜಾರಗುತ್ತು ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಬೌದ್ಧಿಕ ಮತ್ತು ಭೌತಿಕ ಪ್ರಗತಿಗಾಗಿ ದುಡಿದಿರುವ ಇವರನ್ನು ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳೂ ಅರಸಿ ಬಂದಿದೆ.

ಉಡುಪಿ ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ, ಮಲ್ಪೆ ವಿಠೋಬ ದೇವಸ್ಥಾನದ ಅಧ್ಯಕ್ಷರಾಗಿ, ಹಿರಿಯಡ್ಕ ಸಾಹಿತ್ಯ ಸಂಘದ ಅಧ್ಯಕ್ಷರಾಗಿ, ಹಿರಿಯಡ್ಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾಗಿ, ಕಟಪಾಡಿ ವಿಶ್ವನಾಥ ದೇವಸ್ಥಾನದ ಪ್ರತಿಷ್ಠಾ ಸಮಿತಿಯ ಕಾರ್ಯದರ್ಶಿಯಾಗಿ, ಮಲ್ಪೆ ಯುವಕ ಮಂಡಲದ ಅಧ್ಯಕ್ಷರಾಗಿ, ಹಳೇ ವಿದ್ಯಾರ್ಥಿ ಸಂಘಗಳ ಸ್ಥಾಪಕರಾಗಿ, ನಟ, ನಾಟಕಕಾರ, ಸ್ವಯಂಸೇವಕ, ಯಕ್ಷಗಾನ ವೇಷಧಾರಿ, ಕಾದಂಬರಿಕಾರ, ವಾಗ್ಮಿ, ಮಲ್ಪೆ, ಕಲ್ಮಾಡಿ ಹಾಗೂ ಕಾಜಾರ ಗುತ್ತುಗಳಲ್ಲಿ ಯಕ್ಷಗಾನ ಸಂಘಗಳ ಸ್ಥಾಪನೆಗೆ ಪ್ರೇರಣೆ ನೀಡಿದ ಇವರು, ದೀನ ದಲಿತರ ಬಾಳು ಬಂಗಾರವಾಗಬೇಕು ಎಂದು ದುಡಿದ ಮಲ್ಪೆ ರಾಘವೇಂದ್ರರವರು 40 ವರ್ಷಗಳ ಕಾಲ ಸುದೀರ್ಘಾವಧಿ ಶಿಕ್ಷಕರಾಗಿ, ಇಂದಿಗೂ ಚೇತನದ ಚಿಲುಮೆಯಾಗಿದ್ದಾರೆ.