ಕಾರ್ಕಳ ಜ್ಞಾನಸುಧಾ ಕಾಲೇಜಿನಲ್ಲಿ ನಿವೃತ್ತ ಹಿರಿಯ ಶಿಕ್ಷಕರಿಗೆ ಗೌರವಾರ್ಪಣೆ

ಉಡುಪಿ: ಇಂದಿನ ಶಿಕ್ಷಣದಲ್ಲಿ ಸಾಮಾಜಿಕ ಜಾಲತಾಣಗಳ ಭರಾಟೆಯಿಂದ ರಸಕ್ಕಿಂತ ಕಸವೇ ಹೆಚ್ಚು ತುಂಬಿದೆ. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಜೊತೆಗೆ ಪೋಷಕರು ಸಹ ಕೈ ಜೋಡಿಸಿದಲ್ಲಿ ಆದರ್ಶ ಸಮಾಜ ನಿರ್ಮಾಣವಾವಾಗಲು ಸಾಧ್ಯ ಎಂದು ಉಡುಪಿಯ ಡಾ.ಟಿ.ಎಂ.ಎ.ಪೈ.ಕಾಲೇಜ್‌ ಆಫ್‌ ಎಜ್ಯುಕೇಷನ್‌ ಸಂಸ್ಥೆಯ ಸಂಯೋಜನಾಧಿಕಾರಿ, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್‌ ಹೇಳಿದರು.

ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಹಿರಿಯ ಶಿಕ್ಷಕರನ್ನು ಗೌರವಿಸಿ ಮಾತನಾಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳ ಎರಡನೆ ಪಾಲಕರು. ಅಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವ ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಷನ್‌ ಟ್ರಸ್ಟಿನ ಕಾರ್ಯ ಅಭಿನಂದನೀಯ ಎಂದರು. ದೇಹಕ್ಕೆ ವಯಸ್ಸಾಗಬಹುದು ಹೊರತು ರಾಷ್ಟ್ರ ನಿರ್ಮಾಣದ ಭಾವಿ ಪ್ರಜೆಗಳನ್ನು ನಿರ್ಮಿಸುವ ಮಹಾನ್‌ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರ ವೃತ್ತಿಗಲ್ಲ ಎಂದು ಅವರು ಹೇಳಿದರು.

ಟ್ರಸ್ಟ್‌ ನ ಅಧ್ಯಕ್ಷ ಡಾ.ಸುಧಾಕರ್‌ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಶಿಕ್ಷಕ ವೃತ್ತಿಯ ಆಯ್ಕೆ ಮತ್ತು ಕಣ್ಣೆದುರು ಬೆಳೆದ ವಿದ್ಯಾರ್ಥಿ ಮುಂದೊಂದು ದಿನ ಯಶಸ್ಸನ್ನು ಸಾಧಿಸಿದಾಗ ಗುರುವಿಗೆ ಸಿಗುವ ಸಂತೋಷವೆ ಅತಿ ದೊಡ್ಡ ಸನ್ಮಾನ ಎಂದರು.

ಈ ಸಂದರ್ಭದಲ್ಲಿ ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ನ ವತಿಯಿಂದ ಕಾರ್ಕಳ ತಾಲೂಕಿನ ಹಿರಿಯ 6 ಜನ ನಿವೃತ್ತ ಶಿಕ್ಷಕರಾದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾಂತಾವರದ ಧರ್ಮರಾಜ್‌ ಕಂಬಳಿ, ಶ್ರೀ ದುರ್ಗಾ ಅನುದಾನಿತ ಪ್ರಾಥಮಿಕ ಶಾಲೆ ಜೋಡುರಸ್ತೆಯ ಕೆ.ಸಿ.ಲೂಕಸ್‌, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಂಜಾರೆಕಟ್ಟೆಯ ಶ್ರೀಮತಿ ಶಾರದಾ.ಬಿ, ಸರಕಾರಿ ಪ್ರಾಥಮಿಕ ಶಾಲೆ ಕಲ್ಲುಗುಪ್ಪೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಮಿತ್ರಾ ಜೈನ್‌, ಸರಕಾರಿ ಪ್ರಾಥಮಿಕ ಶಾಲೆ ಹೊಸ್ಮಾರಿನ ಶ್ರೀಮತಿ ರೇವತಿ.ಎನ್‌.ರಾಜ್‌ ಹಾಗೂ ಸರಕಾರಿ ಪ್ರಾಥಮಿಕ ಶಾಲೆ ನಂದಳಿಕೆಯ ಶ್ರೀಮತಿ ಬೆನಿಟಾ ಫ್ಲಾವಿಯಾ ಪಿಂಟೋ ಇವರನ್ನು ಗೌರವಿಸಲಾಯಿತು.

ಟ್ರಸ್ಟಿ ಶ್ರೀಮತಿ ವಿದ್ಯಾ ಸುಧಾಕರ್‌ ಶೆಟ್ಟಿ, ಆಡಳಿತ ಮಂಡಳಿ ಸದಸ್ಯ ಶಾಂತಿರಾಜ್‌ ಹೆಗ್ಡೆ, ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ಉಪ ಪ್ರಾಂಶುಪಾಲ ಸಾಹಿತ್ಯ, ಕಾರ್ಕಳ ಜ್ಞಾನಸುಧಾ ಆಂಗ್ಲಮಾದ್ಯಮ ಪ್ರೌಢಶಾಲಾ ಪ್ರಾಂಶುಪಾಲೆ ಶ್ರೀಮತಿ ಉಷಾ ರಾವ್‌ ಯು, ಉಪಪ್ರಾಂಶುಪಾಲೆ ಶ್ರೀಮತಿ ವಾಣಿ. ಕೆ ಉಪಸ್ಥಿತರಿದ್ದರು.

ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ದಿನೇಶ್‌ .ಎಂ.ಕೊಡವೂರ್ ಸ್ವಾಗತಿಸಿ, ಉಪನ್ಯಾಸಕಿ ಸಂಗೀತ ಕುಲಾಲ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.