ಮಂಗಳೂರು: ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿರುವುದಾಗಿ ಬಂಟ್ವಾಳದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಘೋಷಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ರಾಜಕೀಯದಿಂದ ನಿವೃತ್ತನಾದರೂ ಪಕ್ಷದ ಕೆಲಸದಲ್ಲಿ ಸಕ್ರಿಯವಾಗಿರುತ್ತೇನೆ. ಇದು ನನ್ನ ಕೊನೆಯ ಚುನಾವಣೆ. ನಾನು ಸೋತರೂ ಗೆದ್ದರೂ ಪಕ್ಷದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾದರೂ ರಾಜ್ಯದಲ್ಲಿ ಸರ್ಕಾರ ರಚಿಸಿದ್ದೇವೆ. ಜನರಿಗಾಗಿ ಸದಾ ಕೆಲಸ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷ ನನಗೆ ಸರ್ವಶ್ರೇಷ್ಠವಾಗಿದೆ, ಪಕ್ಷವು ನಾನು ಏನು ಮಾಡಬೇಕೆಂದು ಬಯಸುತ್ತದೋ ಅದನ್ನು ನಾನು ಪಾಲಿಸುತ್ತೇನೆ. ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸದಲ್ಲಿ ಸಕ್ರಿಯನಾಗಿರುತ್ತೇನೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಹಿಂದಿನಿಂದಲೂ ಹೈಕಮಾಂಡ್ ನ ಎಲ್ಲ ಆದೇಶ ತಪ್ಪದೆ ಪಾಲಿಸುತ್ತಾ ಬಂದಿದ್ದೇನೆ. ಈ ಬಾರಿ ನನ್ನ ಸೋಲಿನ ಮತಗಳ ಅಂತರ ಕಡಿಮೆಯಾಗಿದೆ. ಗೆಲುವಿನ ವಿಶ್ವಾಸವಿತ್ತು. ಆದರೂ ಸೋಲಾಗಿದೆ. ಮುಂಬರುವ ಚುನಾವಣೆಯಲ್ಲಿ ಸಾರ್ವಜನಿಕರು ಕಾಂಗ್ರೆಸ್ನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ನಮಗಿದೆ. ಲೋಕಸಭಾ ಚುನಾವಣೆ, ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಸಿಗುವ ವಿಶ್ವಾಸವಿದೆ. ಸಿಎಂ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಹೈಕಮಾಂಡ್ಗೆ ಬಿಟ್ಟಿದ್ದು, ಅವರ ನಿರ್ಧಾರವನ್ನು ಪಾಲಿಸುತ್ತೇವೆ ಎಂದರು.
ಲೋಕಸಭೆಗೆ ಸ್ಪರ್ಧಿಸುವ ವಿಚಾರವಾಗಿ, ಪಕ್ಷವು ಸರ್ವಶ್ರೇಷ್ಠವಾಗಿದ್ದು, ನಾನು ಪಕ್ಷಕ್ಕಿಂತ ದೊಡ್ಡವನಲ್ಲ, ಆದ್ದರಿಂದ ಪಕ್ಷ ಏನೇ ನಿರ್ಧರಿಸಿದರೂ ನಾನು ಅದನ್ನು ಪಾಲಿಸುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ನವೀನ್ ಡಿ ಸೋಜಾ, ಕಾಂಗ್ರೆಸ್ ಮುಖಂಡ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್ ಅಶ್ರಫ್, ಸಾಹುಲ್ ಹಮೀದ್, ನೀರಜ್ ಪಾಲ್, ಲ್ಯಾನ್ಸೆಲಾಟ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.