ಲಂಡನ್:ಜುಲೈ 18, 2022ರಂದು ಬೆನ್ ಸ್ಟೋಕ್ಸ್ ಏಕದಿನ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಆಗಸ್ಟ್ 16, 2023ರಂದು ನಿವೃತ್ತಿ ಹಿಂಪಡೆದಿದ್ದಾರೆ. ವಿಶ್ವಕಪ್ಗೂ ಮುನ್ನ ಇಂಗ್ಲೆಂಡ್ ತಂಡ ತವರು ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಆಡಲಿದೆ. ಸಪ್ಟೆಂಬರ್ 8ರಿಂದ ಈ ಪಂದ್ಯಗಳು ನಡೆಯಲಿದೆ. ಈ ಸಿರೀಸ್ನ ಮೂಲಕ ಬೆನ್ ಆಂಗ್ಲರ ಏಕದಿನ ಪಡೆಗೆ ಮತ್ತೆ ಸೇರ್ಪಡೆ ಆಗಲಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ತಮ್ಮ ದೇಶಕ್ಕೆ ಮುಂದಿನ ವಿಶ್ವಕಪ್ ಉಳಿಸಿಕೊಡುವ ಸಲುವಾಗಿ ನಿವೃತ್ತಿ ವಾಪಸ್ ಪಡೆದಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ಸರಣಿಯ ಮೂಲಕ ಮತ್ತೆ ಬೆನ್ ಸ್ಟೋಕ್ಸ್ ಏಕದಿನ ತಂಡಕ್ಕೆ ಮರಳಲಿದ್ದಾರೆ. ಅಕ್ಟೋಬರ್ 5ರಿಂದ ಭಾರತದಲ್ಲಿ ಆರಂಭವಾಗಲಿರುವ ವಿಶ್ವಕಪ್ ಹಿನ್ನೆಲೆಯಲ್ಲಿ ನಿವೃತ್ತಿ ಹಿಂಪಡೆಯುವಂತೆ ಕೇಳಿಕೊಳ್ಳಲಾಗಿತ್ತು. ಏಕದಿನ ತಂಡದ ನಾಯಕ ಜೋಸ್ ಬಟ್ಲರ್ ಸ್ಟೋಕ್ಸ್ ಈ ಕುರಿತು ಖುದ್ದಾಗಿ ವಿನಂತಿಸಿದ್ದರು ಎಂದು ಸುದ್ದಿಯಾಗಿತ್ತು.
ಜುಲೈ 19, 2022ರಂದು ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗಾಗಿ ಸ್ಟೋಕ್ಸ್ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ್ದರು. 105 ಏಕದಿನ ಪಂದ್ಯಗಳನ್ನು ಆಡಿರುವ ಅವರು 38.98 ರ ಸರಾಸರಿಯಲ್ಲಿ 2,924 ರನ್ ಗಳಿಸಿದ್ದಾರೆ. 95ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ ಹೊಂದಿರುವ ಅವರು 90 ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳು ಮತ್ತು 21 ಅರ್ಧಶತಕಗಳನ್ನು ಹೊಂದಿದ್ದಾರೆ. ಈ ಮಾದರಿಯಲ್ಲಿ 74 ವಿಕೆಟ್ ಉರುಳಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ 4 ಟಿ20 ಮತ್ತು 4 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಈ ಸಿರೀಸ್ಗೆ ಇಂಗ್ಲೆಂಡ್ ತಂಡ ಪ್ರಕಟವಾಗಿದೆ. ಏಕದಿನದಲ್ಲಿ ಬೆನ್ ಸ್ಟೋಕ್ಸ್ ತಂಡಕ್ಕೆ ಸೇರಿರುವುದರಿಂದ ಹ್ಯಾರಿ ಬ್ರೂಕ್ ಅವರನ್ನು ಕೈಬಿಡಲಾಗಿದೆ. ಟಿ20 ಮತ್ತು ಏಕದಿನ ತಂಡದಲ್ಲಿ ಅನ್ಕ್ಯಾಪ್ ಆಟಗಾರ ಗಸ್ ಅಟ್ಕಿನ್ಸನ್ ಅವರಿಗೆ ಅವಕಾಶ ಸಿಕ್ಕಿದೆ. ಜೋಶ್ ಟಂಗ್ ಮತ್ತು ಜಾನ್ ಟರ್ನರ್ ಟಿ20 ತಂಡದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಇಂಗ್ಲೆಂಡ್ ಪುರುಷರ ಏಕದಿನ ಕ್ರಿಕೆಟ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್ಸ್ಟೋವ್, ಸ್ಯಾಮ್ ಕರ್ರಾನ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್. ಇಂಗ್ಲೆಂಡ್ ಪುರುಷರ ಟಿ20 ತಂಡ: ಜೋಸ್ ಬಟ್ಲರ್, ರೆಹಾನ್ ಅಹ್ಮದ್, ಮೊಯಿನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್ಸ್ಟೋವ್, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೋಶ್ ಟಂಗ್, ಜಾನ್ ಟರ್ನರ್, ಲ್ಯೂಕ್ ವುಡ್
ಇಂಗ್ಲೆಂಡ್ ಪುರುಷರ ರಾಷ್ಟ್ರೀಯ ತಂಡದ ಆಯ್ಕೆಗಾರ ಲ್ಯೂಕ್ ರೈಟ್, “ನಾವು ವೈಟ್-ಬಾಲ್ ಕ್ರಿಕೆಟ್‌ಗೆ ಎರಡು ಉತ್ತಮ ಪ್ರತಿಭೆಗಳನ್ನು ಒಳಗೊಂಡಿರುವ ಬಲಿಷ್ಠ ತಂಡ ಪ್ರಕಟಿಸಿದ್ದೇವೆ. ಬೆನ್ ಸ್ಟೋಕ್ಸ್‌ನ ಮರಳುವಿಕೆಯು ತಂಡ ಗೆಲುವಿನ ಪ್ರಮಾಣವನ್ನು ಹೆಚ್ಚಿಸಿದೆ. ಅವರ ನಾಯಕತ್ವದ ಗುಣಮಟ್ಟವೂ ತಂಡದೊಂದಿಗೆ ಸೇರುವುದರಿಂದ ಉತ್ತಮ ಗುಣಮಟ್ಟದ ಕ್ರಿಕೆಟ್ ಕಾಣಸಿಗಲಿದೆ. ಸ್ಟೋಕ್ಸ್ ಅವರನ್ನು ಇಂಗ್ಲೆಂಡ್ನ ಪ್ರತಿಯೊಬ್ಬ ಅಭಿಮಾನಿಯೂ ಏಕದಿನ ಕ್ರಿಕೆಟ್ ಜರ್ಸಿಯಲ್ಲಿ ನೋಡಲು ಇಚ್ಚಿಸುತ್ತಾನೆ. ಅವರ ಮರಳುವಿಕೆ ಅಭಿಮಾನಿಗಳಿಗೆ ಸಂತಸ ನೀಡುವುದು ಖಂಡಿತ. ಗಸ್ ಅಟ್ಕಿನ್ಸನ್ ಮತ್ತು ಜಾನ್ ಟರ್ನರ್ ಇಬ್ಬರಿಗೂ ಮೊದಲ ಅಂತಾರಾಷ್ಟ್ರೀಯ ತಂಡ ಪ್ರತಿನಿಧಿಸುತ್ತಿದ್ದಾರೆ. ಜೋಶ್ ಟಂಗ್ ಆಯಶಸ್ ಸರಣಿಯಲ್ಲಿ ರಾಷ್ಟ್ರೀಯ ತಂಡದ ಪಾಲುದಾರರಾಗಿದ್ದರು. ಮೊದಲ ಬಾರಿಗೆ ಏಕದಿನ ಮತ್ತು ಟಿ20 ತಂಡ ಪ್ರತಿನಿಧಿಸುತ್ತಿದ್ದಾರೆ” ಎಂದರು.