ಬೆಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ಕೊರೋನಾದ ಹೊಸ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಂದು ತಾಂತ್ರಿಕ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಸಭೆ ಬಳಿಕ ರಾಜ್ಯ ಸರ್ಕಾರ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗಳಿಗೆ ಕಟ್ಟುನಿಟ್ಟಿನ ಕ್ರಮ ಶಿಫಾರಸು ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಕೇರಳದಲ್ಲಿ ಒಮಿಕ್ರಾನ್ ಹೊಸ ಉಪತಳಿ JN.1 ಪತ್ತೆಯಾದ ಬೆನ್ನಲ್ಲೇ ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ತುರ್ತು ಸಭೆ ನಡೆಸಿ, ಪ್ರಾಥಮಿಕ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮಂಗಳವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಸಭೆ ಸೇರುತ್ತಿದ್ದು, ಸರ್ಕಾರವು ತೆಗೆದುಕೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಸಲಹೆ ನೀಡಲಿದ್ದಾರೆ ಎನ್ನಲಾಗಿದೆ.
ಹೊಸ ವರ್ಷ ಮತ್ತು ಕ್ರಿಸ್‌ಮಸ್ ಹಬ್ಬ ದ ಹಿನ್ನೆಲೆಯಲ್ಲಿ ಕೊರೊನಾ ಜಾಗೃತಿಗಾಗಿ ಹೊಸ ನಿಯಮ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
“ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ ಏರಿಕೆಯು ಹೊಸ ರೂಪಾಂತರವು ಪ್ರತಿರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸುವಲ್ಲಿ ಉತ್ತಮವಾಗಿದೆ ಎಂಬುದನ್ನು ಸೂಚಿಸುತ್ತದೆ ”ಎಂದು ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಬ್ಬರು ಹೇಳಿರುವುದಾಗಿ ಮಾಧ್ಯಮ ವರದಿಯಾಗಿದೆ.
ಸೋಂಕು ಏರಿಕೆ ಕುರಿತು ಭಯಭೀತರಾಗುವ ಅಗತ್ಯವಿಲ್ಲ. ಜನರು ಮಾಸ್ಕ್ ಧರಿಸುವುದು, ಜನದಟ್ಟಣೆ ಇರುವ ಪ್ರದೇಶದಿಂದ ದೂರ ಇರುವುದು ಹಾಗೂ ಕೋವಿಡ್ ಸೂಕ್ತ ನಡವಳಿಕೆಯ್ನು ಅನುಸರಿಸುವುದರಿಂದ ಸೋಂಕಿನಿಂದ ದೂರ ಉಳಿಯಬಹುದು. ಹೊಸ ವರ್ಷ ಸಂಭ್ರಮ ವೇಳೆ ಹೆಚ್ಚು ಜನರು ಸೇರುವುದರಿಂದ ಇದಕ್ಕೆ ನಿರ್ಬಂಧ ಹೇರುವ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ 1,300 ಗಡಿ ದಾಟಿದೆ. ಕೇರಳದಲ್ಲಿ ಪ್ರತಿನಿತ್ಯ 300ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗುತ್ತಿವೆ. ಹೀಗಾಗಿ ಪ್ರಾಥಮಿಕ ಹಂತದಲ್ಲಿಯೇ ಕೊರೊನಾ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.