ಶೀಘ್ರದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇತ್ಯರ್ಥಗೊಳಿಸಿ: ಸಚಿವ ಕೃಷ್ಣ ಬೈರೇಗೌಡ

                                                                                                                                                                      ಮಣಿಪಾಲ: ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಬಗೆಹರಿಸಿ 94ಸಿ/94ಸಿಸಿ ಅಡಿ ಹಕ್ಕುಪತ್ರ ನೀಡಬೇಕು. ಇದಕ್ಕಾಗಿ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆಯನ್ನು ತತ್‌ಕ್ಷಣ ನಡೆಸಬೇಕು ಮತ್ತು ಒಂದೊಮ್ಮೆ ಡೀಮ್ಡ್ ಫಾರೆಸ್ಟ್‌ ಕಾರಣಕ್ಕೆ ಅರ್ಜಿ ತಿರಸ್ಕರಿಸಿದ್ದರೆ ಸುಪ್ರೀಂ ಕೋರ್ಟ್‌ ಆದೇಶಾನುಸಾರ ಆ ಅರ್ಜಿಗಳನ್ನು ಪುನರ್‌ ಪರಿಶೀಲನೆಗೆ ಒಳಪಡಿಸಬೇಕು. ಅದಾಗ್ಯೂ ಸಮಸ್ಯೆ ಉಳಿದಿದ್ದರೆ ರಾಜ್ಯ ಕಚೇರಿಗೆ ಸಲ್ಲಿಸಿ ವಿಶೇಷ ಅನುಮತಿಯಾಧಾರದಲ್ಲಿ ಪರಿಹಾರ ಹುಡುಕಬೇಕು. ಒಟ್ಟಿನಲ್ಲಿ ಜನ ಸಾಮಾನ್ಯರ ಕಾರ್ಯವನ್ನು ವಿಳಂಬವಿಲ್ಲದೆ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಭೂ ಸುರಕ್ಷ ಆನ್‌ಲೈನ್‌ ಪೋರ್ಟಲ್‌ನಲ್ಲಿ ಲಭ್ಯ:
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿಪರಿಶೀಲನೆ ನಡೆಸಿದ ಅವರು, ಸರಕಾರ ಭೂ ದಾಖಲೆಗಳನ್ನು ಗಣಕೀಕರಣಗೊಳಿಸುತ್ತಿದೆ. ಮೊಬೈಲ್‌, ಕಂಪ್ಯೂಟರ್‌ ಮೂಲಕ ಮನೆಯಲ್ಲೇ ಕುಳಿತು ಭೂ ದಾಖಲೆಯನ್ನು ಭೂ ಸುರಕ್ಷ ಆನ್‌ಲೈನ್‌ ಪೋರ್ಟಲ್‌ನಲ್ಲಿ ಪಡೆಯಬಹುದು. ನಾಡ ಕಚೇರಿಯಲ್ಲೂ ಪಡೆಯಬಹುದು. ಒಂದಿಷ್ಟು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು. ಡಿಜಿಟಲ್‌ ಮೂಲಕ ದೃಢೀಕೃತ ದಾಖಲೆ ನೀಡಬೇಕು. ಇದರಲ್ಲಿ ಕಣ್ಣಾಮುಚ್ಚಾಲೆ ಆಟ ಆಡಬಾರದು ಮತ್ತು ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಜಮೀನಿಗೆ ಪೋಡಿ ಮಾಡುವ ಕಾರ್ಯದ ವೇಗ ಹೆಚ್ಚಿಸಿ:
ದರ್ಖಾಸುನಲ್ಲಿ 20 ರಿಂದ 50 ವರ್ಷಗಳಲ್ಲಿ ಮಂಜೂರಾಗಿರುವ ಜಮೀನಿಗೆ ಪೋಡಿ ಮಾಡಿ ರೈತರಿಗೆ ಪಹಣಿ ನೀಡುವ ಕಾರ್ಯಗಳ ವಿಲೇವಾರಿ ನಿಗದಿತ ಪ್ರಮಾಣದಲ್ಲಿ ಆಗಿಲ್ಲ. ಕಂದಾಯ ಇಲಾಖೆಯ ಕೆಳ ಹಂತದ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ಮೇಲಾಧಿಕಾರಿಗಳು, ತಹಶೀಲ್ದಾರರು ಸಭೆ ಕರೆದು ಪ್ರಗತಿ ಪರಿಶೀಲಿಸಿ ಪೋಡಿ ಮಾಡುವ ಕಾರ್ಯದ ವೇಗವನ್ನು ಹೆಚ್ಚಿಸಬೇಕು. ನಿರ್ದಿಷ್ಟ ಕಾಲಮಿತಿಯಲ್ಲಿ 10 ಸಾವಿರ ಜಮೀನಿಗೆ ಪೋಡಿ ಮಾಡಿಸಬೇಕು ಎಂದು ಅವರು ಹೇಳಿದರು.

ಜಮೀನಿನ ಪೌತಿ ಖಾತೆ ಮಾಡಬೇಕಿದೆ:
ಜಿಲ್ಲೆಯಲ್ಲಿ ಪೌತಿ ಖಾತೆ ಆರಂಭಿಸಲಾಗಿದ್ದು, ಪ್ರಗತಿ ನಿಧಾನದಲ್ಲಿದೆ. ಇದರ ವೇಗವನ್ನು ಹೆಚ್ಚಿಸಬೇಕು. ಜಿಲ್ಲೆಯಲ್ಲಿ 2,92,000 ಜಮೀನಿನ ಪೌತಿ ಖಾತೆ ಮಾಡಬೇಕಿದೆ. ಮೃತರ ಹೆಸರಿನಲ್ಲಿ ಜಮೀನಿನ ಖಾತೆಗಳು ಇದ್ದಲ್ಲಿ ಸರಕಾರದ ಸೌಲಭ್ಯಗಳು ಹಾಗೂ ಸಬ್ಸಿಡಿ ಪಡೆಯಲು ಸಾಧ್ಯವಾಗದು. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ. ಇವುಗಳನ್ನು ಆದ್ಯತೆಯ ಮೇಲೆ ಮಾಡಬೇಕು. ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಸಚಿವರು ಸೂಚಿಸಿದರು.

ತಹಶೀಲ್ದಾರ್‌ ಕಚೇರಿಯಲ್ಲಿ ಇರುವ 100 ಕೋಟಿ ದಾಖಲೆ ಸ್ಕ್ಯಾನಿಂಗ್‌, ಹಳೇ ಕಡತಗಳನ್ನು ಸ್ಕ್ಯಾನ್‌ ಮಾಡಿಸಲಾಗುತ್ತಿದೆ. ಸುಮಾರು 100 ಕೋಟಿ ಪುಟಗಳ ದಾಖಲೆ ಸ್ಕ್ಯಾನ್‌ ಮಾಡಬೇಕಿದ್ದು, 34.29 ಕೋಟಿ ಪುಟಗಳನ್ನು ಸ್ಕ್ಯಾನಿಂಗ್‌ ಮಾಡಲಾಗಿದೆ ಎಂದರು ಸಚಿವರು.

ಮಳೆಗಾಲದಲ್ಲಿ ಗುಡುಗು-ಸಿಡಿಲಿಗೆ ಮುಂಜಾಗ್ರತೆ ಕ್ರಮ ವಹಿಸಿ:ಗುಡುಗು-ಸಿಡಿಲು ಮಾಹಿತಿ ನೀಡಿ
ಪೂರ್ವ ಮುಂಗಾರಿನಲ್ಲಿ ಮಳೆ ಬರುವ ಸಂದರ್ಭದಲ್ಲಿ ಸಿಡಿಲು, ಗುಡುಗಿನಿಂದ ಪ್ರತಿ ವರ್ಷ 70 ಕ್ಕೂ ಹೆಚ್ಚು ಜನರು ರಾಜ್ಯದಲ್ಲಿ ಸಾವಿಗೀಡಾಗುತ್ತಿದ್ದಾರೆ. ಕಾರಣ ಸಿಡಿಲು ಬಡಿಯುವಾಗ ಜನರು ಎಲ್ಲಿ ಆಶ್ರಯ ಪಡೆಯಬೇಕು ಎಂಬ ಮಾಹಿತಿ ಕೊರತೆಯಿಂದ ಈ ಸಾವು -ನೋವುಗಳು ಉಂಟಾಗುತ್ತಿವೆ. ಈ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಪಂಚಾಯತ್‌ ಮಟ್ಟದ ಕಾರ್ಯಪಡೆ ಸಕ್ರಿಯವಾಗಿರಬೇಕು. ಮಳೆಗಾಲದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಜನರ ಸುಗಮ ಸಂಚಾರ:
ಮಳೆಯಿಂದ ರಸ್ತೆಗಳು ಹಾಳಾಗಿವೆ. ಜನರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಗುಂಡಿ ಮುಚ್ಚಬೇಕು. ಇವು ಎನ್‌ಡಿಆರ್‌ಎಫ್‌ ನಿಯಮಾವಳಿಯ ಪ್ರಕಾರ ಪ್ರಸ್ತಾವನೆಯನ್ನು ಸಲ್ಲಿಸಿದರೆ ಅನುಮೋದಿಸಲಾಗುವುದು. ಗುಂಡಿ ಮುಚ್ಚುವಂತಹ ಸಣ್ಣ ಪುಟ್ಟ ಕಾರ್ಯಗಳಿಗೆ ಹೆಚ್ಚು ಅನುದಾನ ಕೇಳಿದಲ್ಲಿ ನೀಡಲಾಗದು ಎಂದರು.

ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ್‌ ಬಾಯಲ್‌, ಡಿಎಫ್‌ಒ ಗಣಪತಿ, ವನ್ಯಜೀವಿ ವಿಭಾಗದ ಡಿಎಫ್‌ ಶಿವರಾಮ್‌ ಎಂ.ಬಾಬು ಸಭೆಯಲ್ಲಿದ್ದರು.