ನವದೆಹಲಿ: ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಕೌನ್ಸಿಲ್ (ಎಐಎಸ್ಎಸ್ಸಿ) ಶನಿವಾರ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, “ಕೆಲವು ಅಂಶಗಳು” ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಇದು ಇಡೀ ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತಿದ್ದು, ಇದನ್ನು ಎದುರಿಸಲು ಧಾರ್ಮಿಕ ಮುಖಂಡರು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.
ಕೆಲವರು ಧರ್ಮದ ಹೆಸರಿನಲ್ಲಿ ಹಗೆತನ ಸೃಷ್ಟಿಸಿ ಇಡೀ ದೇಶದ ಮೇಲೆ ದುಷ್ಪರಿಣಾಮ ಬೀರುತ್ತಾರೆ. ಇದಕ್ಕೆ ನಾವು ಮೂಕಪ್ರೇಕ್ಷಕರಾಗಲು ಸಾಧ್ಯವಿಲ್ಲ. ಧಾರ್ಮಿಕ ದ್ವೇಷವನ್ನು ಎದುರಿಸಲು, ನಾವು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಪ್ರತಿಯೊಂದು ಧಾರ್ಮಿಕ ಸಂಸ್ಥೆಯನ್ನು ಭಾರತದ ಭಾಗವೆಂದು ಭಾವಿಸಬೇಕು. ಇದರಲ್ಲಿ ನಾವು ಒಟ್ಟಿಗೆ ಸಾಗುತ್ತೇವೆ ಮತ್ತು ಮುಳುಗುತ್ತೇವೆ, ”ಎಂದು ನವದೆಹಲಿಯ ಕಾನ್ಸ್ಟಿಟ್ಯೂಶನ್ ಕ್ಲಬ್ನಲ್ಲಿ ಆಯೋಜಿಸಲಾದ ಸಮ್ಮೇಳನದಲ್ಲಿ ದೋವಲ್ ಹೇಳಿದರು.
ಸಮ್ಮೇಳನದಲ್ಲಿ, ಎಐಎಸ್ಎಸ್ಸಿಯ ಆಶ್ರಯದಲ್ಲಿ ಧಾರ್ಮಿಕ ಮುಖಂಡರು “ಪಿಎಫ್ಐನಂತಹ ಸಂಘಟನೆಗಳು” ಮತ್ತು “ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ” ಇತರ ಸಂಘಟನೆಗಳನ್ನು ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿದರು. ಇದರ ಜೊತೆಗೆ ಚರ್ಚೆಗಳಲ್ಲಿ ಯಾವುದೇ ದೇವರು/ದೇವತೆ/ಪ್ರವಾದಿಗಳನ್ನು ಗುರಿಯಾಗಿಸಿಕೊಂಡು ಯಾರೇ ತಪ್ಪಾಗಿ ಮಾತನಾಡಿದರೂ ಅದನ್ನು ಖಂಡಿಸಬೇಕು ಮತ್ತು ಕಾನೂನಿನ ಪ್ರಕಾರ ವ್ಯವಹರಿಸಬೇಕು ಎನ್ನುವ ನಿರ್ಣಯವನ್ನೂ ತೆಗೆದುಕೊಳ್ಳಲಾಯಿತು.
ಧರ್ಮಗಳು ಮತ್ತು ಅದರ ಅನುಯಾಯಿಗಳ ವಿರುದ್ಧ ದ್ವೇಷವನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿರುವುದನ್ನು ಗಮನಿಸಲಾಗಿದ್ದು, ಸರ್ಕಾರವು ಇದನ್ನು ಗಂಭೀರವಾಗಿ ತೆಗೆದುಕೊಂಡು ಈ ಅಪಾಯವನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಮ್ಮೇಳನದಲ್ಲಿ ವಿನಂತಿ ಮಾಡಲಾಯಿತು. ಭಾರತದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಮರಸ್ಯ ಮತ್ತು ಸಹೋದರತ್ವದ ಸಂದೇಶವನ್ನು ಹರಡಲು ಎಲ್ಲ ಧರ್ಮಗಳ ಗುರುಗಳ ನೇತೃತ್ವದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಿಯಮಿತವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಯಿತು.
ಸಮಾರಂಭದಲ್ಲಿ ಅಖಿಲ ಭಾರತ ಸೂಫಿ ಸಜ್ಜಾದ ನಶೀನ್ ಕೌನ್ಸಿಲ್ (ಎಐಎಸ್ಎಸ್ಸಿ) ಅಧ್ಯಕ್ಷ ಹಜರತ್ ಸೈಯದ್ ನಾಸೆರುದ್ದೀನ್ ಚಿಶ್ತಿ ಮಾತನಾಡಿ, “ಘಟನೆ ಸಂಭವಿಸಿದಾಗ ನಾವು ಅದನ್ನು ಖಂಡಿಸುತ್ತೇವೆ. ಏನನ್ನಾದರೂ ಮಾಡಲು ಇದು ಸರಿ ಸಮಯ. ಮೂಲಭೂತವಾದಿ ಸಂಘಟನೆಗಳಿಗೆ ಕಡಿವಾಣ ಹಾಕುವ ಮತ್ತು ನಿಷೇಧಿಸುವ ಅಗತ್ಯವಿದೆ. ಅವರ ವಿರುದ್ಧ ಸಾಕ್ಷ್ಯಾಧಾರಗಳಿದ್ದರೆ ಅವುಗಳನ್ನು ನಿಷೇಧಿಸಬೇಕು’’ ಎಂದು ಒತ್ತಾಯಿಸಿದರು.