ಉಡುಪಿ: ಮೂಲತಃ ಹೆಜಮಾಡಿ ಗ್ರಾಮದವರಾದ ಪಡುಬಿದ್ರಿ ಪರಿಸರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಪಾಂಡು (78) ಎಂಬ ವೃದ್ಧರನ್ನು ರಕ್ಷಿಸಿ, ಆಶ್ರಯ ಕಲ್ಪಿಸುವ ಸಲುವಾಗಿ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಶ್ವಾಸದ ಮನೆ ವೃದ್ದಾಶ್ರಮಕ್ಕೆ 2025 ರ ಮಾರ್ಚ್ 21 ರಂದು ದಾಖಲಿಸಲಾಗಿರುತ್ತದೆ.
ಈ ವೃದ್ಧರಿಗೆ ಮೂರು ಜನ ಮಕ್ಕಳಿರುವುದು ತಿಳಿದುಬಂದ ಹಿನ್ನೆಲೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ವೃದ್ಧರನ್ನು ವಿಚಾರಿಸಿದಾಗ ಕೌಟುಂಬಿಕ ಕಲಹದಿಂದ ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದು, ವೃದ್ಧರ ಮಕ್ಕಳನ್ನು ಪತ್ತೆಹಚ್ಚಿ, ಅವರನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಕರೆತಂದು ಹಿರಿಯ ನಾಗರಿಕರ ಕಾಯ್ದೆ, 2007 ರ ಕುರಿತು ಮಾಹಿತಿ ನೀಡಿ ಅರಿವು ಮೂಡಿಸುವುದರೊಂದಿಗೆ ವೃದ್ಧಾಶ್ರಮದಿಂದ ಪಾಂಡು ಅವರನ್ನು ಬಿಡುಗಡೆಗೊಳಿಸಿ, ಅವರ ಕುಟುಂಬಕ್ಕೆ ಮರು ಸೇರ್ಪಡೆಗೊಳಿಸಲಾಗಿರುತ್ತದೆ.
ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ಹಾಗೂ ಸಮನ್ವಯ ಕಾರ್ಯವನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಯೋಜನಾ ಸಂಯೋಜಕ ರೋಶನ್ ಕೆ, ಆಪ್ತ ಸಮಾಲೋಚಕಿ ನಯನಾ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಕೈಗೊಂಡು ಪ್ರಕರಣವನ್ನು ಸುಖ್ಯಾಂತಗೊಳಿಸಲು ಸಹಕರಿಸಿರುತ್ತಾರೆ.















