ಉಡುಪಿ: ‘ಏಕ್ ದೇಶ್ ಮೆ ದೊ ವಿಧಾನ್, ದೊ ಪ್ರಧಾನ್ ಔರ್ ದೊ ನಿಶಾನ್ ನಹೀ ಚಲೇಗಾ’ ಎಂಬ ಘೋಷಣೆಯೊಂದಿಗೆ ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣ ವಿಲೀನಗೊಳಿಸುವ ಬೇಡಿಕೆಯೊಂದಿಗೆ ಸತ್ಯಾಗ್ರಹ, ಹೋರಾಟಗಳ ಮೂಲಕ ಅಖಂಡ ಭಾರತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಬಲಿದಾನಗೈದ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಜೀವನಾದರ್ಶ ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನೇತೃತ್ವದಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ 370ನೇ ವಿಧಿಯ ರದ್ದತಿಯಾಗಿರುವುದು ಡಾ. ಶ್ಯಾಮಪ್ರಸಾದ್ ಮುಖರ್ಜಿಯವರಿಗೆ ಸಂದ ಅರ್ಥಪೂರ್ಣ ಶೃದ್ಧಾಂಜಲಿಯಂತಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಹೇಳಿದರು.
ಅವರು ಗುರುವಾರದಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜನಸಂಘದ ಸಂಸ್ಥಾಪಕ ಹಾಗೂ ಪ್ರಥಮ ಅಧ್ಯಕ್ಷ ಡಾ. ಶ್ಯಾಮಪ್ರಸಾದ್ ಮುಖರ್ಜಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮುಖರ್ಜಿ ಜೀವನಾದರ್ಶಗಳನ್ನು ವಿಶ್ಲೇಷಿಸಿ ಮಾತನಾಡಿದರು.
ಜುಲೈ 6, 1901ರಲ್ಲಿ ಕಲ್ಕತ್ತದಲ್ಲಿ ಜನಿಸಿದ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರು ಮಹಾ ಮೇಧಾವಿಯಾಗಿದ್ದು, ಬ್ಯಾರಿಸ್ಟರ್ ಪದವಿ ಸಹಿತ ಉನ್ನತ ವ್ಯಾಸಂಗವನ್ನು ಪಡೆದು 1924ರಲ್ಲಿ ಕಲ್ಕತ್ತ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು. ನೆಹರೂ ಸಂಪುಟದಲ್ಲಿ ಸಚಿವರಾಗಿದ್ದ ಮುಖರ್ಜಿಯವರು ನೆಹರೂ ಸಿದ್ಧಾಂತವನ್ನು ವಿರೋಧಿಸಿ 1950ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, 1951ರಲ್ಲಿ ಭಾರತೀಯ ಜನಸಂಘ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಮೊದಲ ಅಧ್ಯಕ್ಷರಾದರು.
ರಾಷ್ಟ್ರವಾದಿ ಭಾವನೆಗಳನ್ನು ಮೈಗೂಡಿಸಿಕೊಳ್ಳುವಂತೆ ಯುವಕರಿಗೆ ಕರೆ ನೀಡಿರುವ ಮುಖರ್ಜಿಯವರು ಜಮ್ಮು ಕಾಶ್ಮೀರದ 370ನೇ ವಿಧಿ ರದ್ಧತಿಯ ಹೋರಾಟಕ್ಕೆ ಧುಮುಕಿ 1953 ಮೇ 11ರಂದು ಕಾಶ್ಮೀರ ಪ್ರವೇಶಿಸಿ ಬಂಧಿತರಾದರು. ಜೂನ್ 23ರಂದು ಶ್ರೀನಗರದಲ್ಲಿ ಅವರ ಬಲಿದಾನವಾಯಿತು ಎಂದರು.
ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಸ್ವದೇಶಿ ಹಾಗೂ ಸ್ವಾವಲಂಬನೆಯ ಚಿಂತನೆಯೊಂದಿಗೆ ದೇಶದ ಅಖಂಡತೆಗೆ ತನ್ನನ್ನು ಸಮರ್ಪಿಸಿಕೊಂಡಿರುವ ಡಾ. ಶ್ಯಾಮಪ್ರಸಾದ್ ಮುಖರ್ಜಿರವರ ತತ್ವಾದರ್ಶಗಳು ಬಿಜೆಪಿ ಕಾರ್ಯಕರ್ತರಿಗೆ ಸದಾ ಸ್ಪೂರ್ತಿದಾಯಕ. ದೇಶ ವಿಭಜನೆಯಿಂದ ನಡೆದ ಘೋರ ಕಗ್ಗೊಲೆ, ಮುಸ್ಲಿಂ ತುಷ್ಟೀಕರಣ, ಪಾಶ್ಚಾತ್ಯ ನೀತಿಗಳತ್ತ ವಾಲಿಕೆಯ ಸ್ಥಿತಿಗತಿಗಳನ್ನರಿತ ಡಾ. ಶ್ಯಾಮಪ್ರಸಾದ್ ಪ್ರಸಾದ್ ಮುಖರ್ಜಿಯವರು ನೆಹರೂ ಸಂಪುಟದಿಂದ ನಿರ್ಗಮಿಸಿ, ಭಾರತೀಯ ಜನ ಸಂಘವನ್ನು ಸ್ಥಾಪಿಸಿ, ಜಮ್ಮು ಕಾಶ್ಮೀರದ 370ನೇ ವಿಧಿ ರದ್ದತಿಯ ಹೋರಾಟದ ಮೂಲಕ ದೇಶದ ಅಖಂಡತೆಗೆ ನೀಡಿರುವ ಕೊಡುಗೆ ಸದಾ ಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲಗಳ ಪದಾಧಿಕಾರಿಗಳು, ನಗರಸಭಾ ಸದಸ್ಯರು, ವಿವಿಧ ಸ್ತರದ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಪೆರ್ಣಂಕಿಲ ಶ್ರೀಶ ನಾಯಕ್ ಸ್ವಾಗತಿಸಿದರು. ಜಿಲ್ಲಾ ಸಹ ಸಂಚಾಲಕ ಗಿರೀಶ್ ಎಮ್. ಅಂಚನ್ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ವಂದಿಸಿದರು.