ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದ್ದು, ಪ್ರಕರಣದ 14ನೇ ಆರೋಪಿ ಪ್ರದೋಷ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಕ್ಷಮಾದಾನ ಅರ್ಜಿಯಲ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾನೆ.
ತಾನು ರೇಣುಕಾಸ್ವಾಮಿಗೆ ಹಲ್ಲೆ ನಡೆಸುವುದನ್ನು ತಡೆಯಲು ಪ್ರಯತ್ನಿಸಿದ್ದರೂ ದರ್ಶನ್ ಹಾಗೂ ಇತರ ಆರೋಪಿಗಳು ತನ್ನ ಮಾತು ಕೇಳಲಿಲ್ಲ ಎಂದು ಪ್ರದೋಷ್ ಅರ್ಜಿಯಲ್ಲಿ ಹೇಳಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಗೊತ್ತಿರುವ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ಹೇಳಲು ಸಿದ್ಧನಿದ್ದು, ತನ್ನನ್ನು ಕ್ಷಮಿಸಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾನೆ.
‘ಹೊಡೆಯುವುದು ಬಿಡಿ ಎಂದು ಮನವಿ ಮಾಡಿದ್ದೆ’
ರೇಣುಕಾಸ್ವಾಮಿ ಮೇಲೆ ದರ್ಶನ್ ಹಾಗೂ ತಂಡ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ‘ಹೊಡೆಯುವುದು ಬಿಡಿ’ ಎಂದು ತಾನು ಹಲವು ಬಾರಿ ಮನವಿ ಮಾಡಿದ್ದರೂ ಯಾರೂ ತನ್ನ ಮಾತಿಗೆ ಕಿವಿಗೊಡಲಿಲ್ಲ ಎಂದು ಪ್ರದೋಷ್ ಆರೋಪಿಸಿದ್ದಾನೆ.
ರೇಣುಕಾಸ್ವಾಮಿಗೆ ಸಿಗರೇಟ್‌ನಿಂದ ಸುಟ್ಟಿರುವುದಾಗಿಯೂ, ದರ್ಶನ್ ಸ್ವತಃ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿಯೂ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.
ರೇಣುಕಾಸ್ವಾಮಿಯ ಮೊಬೈಲ್ ಪರಿಶೀಲಿಸಿದಾಗ ಪವಿತ್ರಾ ಗೌಡ ಮಾತ್ರವಲ್ಲದೆ ಇನ್ನೂ ಮೂವರು ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸಿರುವುದು ಬೆಳಕಿಗೆ ಬಂದಿತ್ತು. ಇದರಿಂದ ದರ್ಶನ್ ಹಾಗೂ ತಂಡ ಮತ್ತಷ್ಟು ಆಕ್ರೋಶಗೊಂಡು ಹಲ್ಲೆ ಮುಂದುವರಿಸಿದರು ಎಂದು ಪ್ರದೋಷ್ ಹೇಳಿಕೊಂಡಿದ್ದಾನೆ.
‘ನಾನೇ ಊಟ, ನೀರು ನೀಡಿದ್ದೆ’
ಹಲ್ಲೆಯಿಂದ ತೀವ್ರವಾಗಿ ನರಳುತ್ತಿದ್ದ ರೇಣುಕಾಸ್ವಾಮಿಗೆ ತಾನೇ ವೈಯಕ್ತಿಕವಾಗಿ ಊಟ ಹಾಗೂ ನೀರು ತಂದುಕೊಟ್ಟಿದ್ದಾಗಿ ಪ್ರದೋಷ್ ಹೇಳಿದ್ದಾನೆ. ಆದರೆ ಪರಿಸ್ಥಿತಿ ತನ್ನ ಕೈಮೀರಿ ಹೋಗಿತ್ತು ಎಂದು ಅರ್ಜಿಯಲ್ಲಿ ತಿಳಿಸಿದ್ದಾನೆ.
ನಂತರ ಚಾಲಕ ರವಿಶಂಕರ್ ಬಂದು ರೇಣುಕಾಸ್ವಾಮಿ ಮೃತಪಟ್ಟಿರುವುದಾಗಿ ತಿಳಿಸಿದಾಗ ದರ್ಶನ್ ತೀವ್ರ ಆತಂಕಕ್ಕೊಳಗಾಗಿದ್ದರು ಎಂದು ಪ್ರದೋಷ್ ಆರೋಪಿಸಿದ್ದಾನೆ.
ಕೊಲೆ ಪ್ರಕರಣದಿಂದ ಪಾರಾಗಲು ಸಹಾಯ ಮಾಡದಿದ್ದರೆ ತಾನೇ ಗುಂಡು ಹಾರಿಸಿಕೊಂಡು ಸಾಯುವುದಾಗಿ ದರ್ಶನ್ ಬೆದರಿಸಿದ್ದರು. ಈ ಭೀತಿಯಿಂದಲೇ ತಾನು ಶವ ವಿಲೇವಾರಿ ಸೇರಿದಂತೆ ಪ್ರಕರಣ ಮುಚ್ಚಿಹಾಕುವ ಪ್ರಯತ್ನಕ್ಕೆ ಸಹಾಯ ಮಾಡಬೇಕಾಯಿತು ಎಂದು ಪ್ರದೋಷ್ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
‘ಜೈಲಿನಲ್ಲೂ ಕಿರುಕುಳ’
ಕೊಲೆ ಪ್ರಕರಣದ ಬಳಿಕ ಜೈಲು ಸೇರಿದ ನಂತರವೂ ದರ್ಶನ್ ತಮ್ಮನ್ನು ಬಿಡಲಿಲ್ಲ. ಜೈಲಿನಲ್ಲಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ ಎಂದು ಪ್ರದೋಷ್ ಆರೋಪಿಸಿದ್ದಾನೆ.
ಈ ಘಟನೆಗಳಿಂದ ತಾನು ತೀವ್ರವಾಗಿ ನೊಂದಿದ್ದು, ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ. ಪ್ರಕರಣದಲ್ಲಿ ತನ್ನ ಯಾವುದೇ ನೇರ ತಪ್ಪಿಲ್ಲ. ಸಂದರ್ಭಕ್ಕೆ ಸಿಲುಕಿ ಸಹಾಯ ಮಾಡಬೇಕಾಯಿತು ಎಂದು ಹೇಳಿರುವ ಪ್ರದೋಷ್, ತನಗೆ ತಿಳಿದಿರುವ ಎಲ್ಲ ಸತ್ಯಗಳನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಲು ಸಿದ್ಧನಿದ್ದೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಯಾರು ಈ ಪ್ರದೋಷ್?
ಗಿರಿನಗರದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ ಪ್ರದೋಷ್, ಇತ್ತೀಚಿನ ವರ್ಷಗಳಲ್ಲಿ ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಆತ, ಅಭಿನಯ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದ.
ಈ ಆಸಕ್ತಿಯಿಂದ ದರ್ಶನ್ ಸಂಪರ್ಕಕ್ಕೆ ಬಂದಿದ್ದ ಪ್ರದೋಷ್, ದರ್ಶನ್ ಅಭಿನಯದ ‘ಬೃಂದಾವನ’, ‘ಬುಲ್ಬುಲ್’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ದರ್ಶನ್ ಅವರನ್ನು ಪಾರು ಮಾಡಲು ಪ್ರದೋಷ್ ಪ್ರಯತ್ನಿಸಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ತನ್ನ ಹೆಸರು ಪ್ರಕರಣದಲ್ಲಿ ಬಾರದಂತೆ ನೋಡಿಕೊಳ್ಳಲು ದರ್ಶನ್, ಪ್ರದೋಷ್‌ಗೆ ₹30 ಲಕ್ಷ ನೀಡಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ತನಿಖೆ ವೇಳೆ ಪ್ರದೋಷ್ ನಿವಾಸದಲ್ಲಿದ್ದ ₹30 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ಪ್ರಕರಣದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಪ್ರದೋಷ್ ಸಲ್ಲಿಸಿರುವ ಕ್ಷಮಾದಾನ ಅರ್ಜಿಯಲ್ಲಿನ ಆರೋಪಗಳು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿದ್ದು, ಅವು ಸಾಬೀತಾಗಬೇಕಿದೆ.















