ಬೆಂಗಳೂರು: ನಟ ದರ್ಶನ್ ಹಾಗೂ ಇತರರ ವಿರುದ್ಧದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರೇಣುಕಾಸ್ವಾಮಿ ಅವರ ತಾಯಿ ಪಾಟೀ ಸಲ್ಲಿಸಿದ್ದ ಸವಾಲಿನ ಅರ್ಜಿಗೆ ಅವಕಾಶ ಕೋರಿ ಪ್ರಾಸಿಕ್ಯೂಷನ್ ಹೈಕೋರ್ಟ್ ಪೀಠದ ಮುಂದೆ ಅರ್ಜಿ ಸಲ್ಲಿಸಿದೆ.
ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು. ಈ ವೇಳೆ ದರ್ಶನ್ ಪರ ವಕೀಲ ಸುನೀಲ್ಕುಮಾರ್ ವಾದ ಮಂಡನೆಗೆ ಕಾಲಾವಕಾಶ ಕೋರಿದರು.
ವಿಚಾರಣಾ ನ್ಯಾಯಾಲಯದಲ್ಲಿ ದರ್ಶನ್ ಪರವಾಗಿ ಹಾಜರಾಗುತ್ತಿದ್ದೇನೆ. ಆದರೆ, ಹೈಕೋರ್ಟ್ನಲ್ಲಿರುವ ಈ ಪ್ರಕರಣದಿಂದ ನಿವೃತ್ತಿಯಾಗಲು ಬಯಸಿದ್ದೇನೆ. ಈ ಅರ್ಜಿಗೆ ಸಂಬಂಧಿಸಿದಂತೆ ವಾದ ಮಂಡಿಸಲು ದರ್ಶನ್ ಅವರಿಂದ ಯಾವುದೇ ಸೂಚನೆ ದೊರೆತಿಲ್ಲ. ಆದ್ದರಿಂದ ಕಾಲಾವಕಾಶ ನೀಡಬೇಕು ಎಂದು ಅವರು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಪ್ರಾಸಿಕ್ಯೂಟರ್ ಪಿ. ಪ್ರಸನ್ನಕುಮಾರ್, ವಕೀಲರ ಈ ಹೇಳಿಕೆ ವಿಚಾರಣೆಯನ್ನು ವಿಳಂಬಗೊಳಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು. ಪ್ರಕರಣದ ವಿಚಾರಣೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ದರ್ಶನ್ ಅವರೇ ಸುಪ್ರೀಂ ಕೋರ್ಟ್ಗೆ ತೆರಳಿ ಈ ಆದೇಶ ಪಡೆದುಕೊಂಡು ಬಂದಿದ್ದು, ಈಗ ಪ್ರತಿಯೊಂದು ಹಂತದಲ್ಲೂ ತಕರಾರು ತೆಗೆದು ವಿಚಾರಣೆ ವಿಳಂಬಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುನೀಲ್ಕುಮಾರ್, “ವಿಚಾರಣೆ ಶೀಘ್ರ ಪೂರ್ಣಗೊಳಿಸುವಂತೆ ನಾವು ಸುಪ್ರೀಂ ಕೋರ್ಟ್ಗೆ ವಿಶೇಷ ಮೇಲ್ಮನವಿ ಸಲ್ಲಿಸಿರಲಿಲ್ಲ. ನಮ್ಮ ಕಕ್ಷಿದಾರರಿಗೆ ಜೈಲಿನಲ್ಲಿ ಮನೆ ಊಟ ನೀಡಲು, ಸೂಕ್ತ ಸೌಲಭ್ಯ ಒದಗಿಸಲು ಹಾಗೂ ತ್ವರಿತಗತಿಯಲ್ಲಿ ವಿಚಾರಣೆ ನಡೆಯದ ಕಾರಣ ಜಾಮೀನು ನೀಡಬೇಕೆಂದು ಕೋರಿದ್ದೆವು. ಈ ವೇಳೆ ಸುಪ್ರೀಂ ಕೋರ್ಟ್ ವಿಚಾರಣೆಗೆ ಕಾಲಮಿತಿ ನಿಗದಿಪಡಿಸಿ ನಿರ್ದೇಶನ ನೀಡಿತ್ತು,” ಎಂದು ಸಮಜಾಯಿಷಿ ನೀಡಿದರು.
ಈ ವೇಳೆ ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ಪರ ವಕೀಲರ ನಡುವೆ ಕೆಲಕಾಲ ವಾಕ್ಸಮರ ನಡೆಯಿತು. ಅಂತಿಮವಾಗಿ, ದರ್ಶನ್ ಹಾಗೂ ಇತರ ಆರೋಪಿಗಳು ಜೈಲಿನಲ್ಲಿದ್ದು, ಈ ಅರ್ಜಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಈ ಪ್ರಕರಣದಿಂದ ನಿವೃತ್ತಿಯಾಗಲು ಬಯಸುತ್ತೇನೆ ಎಂದು ಸುನೀಲ್ಕುಮಾರ್ ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿತು.

















