ತೆಂಕುತಿಟ್ಟು ಯಕ್ಷಗಾನದ ಯಕ್ಷ “ರಾಜ” ಪೆರುವಾಯಿ ನಾರಾಯಣ ಶೆಟ್ಟಿ ನಿಧನ

ವಿಟ್ಲ: ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಇವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ಮುಂಚೂಣಿಯ ಕಲಾವಿದರಾಗಿ ಐವತ್ತು ವರ್ಷಗಳ ಕಾಲ ಕಲಾ ಸೇವೆ ಸಲ್ಲಿಸಿದ ಪೆರುವಾಯಿ ನಾರಾಯಣ ಶೆಟ್ಟಿಯವರು ಜಾಬಾಲಿ, ಅರುಣಾಸುರ, ರಕ್ತಬೀಜ, ಕೌರವ, ಕರ್ಣ, ಅರ್ಜುನ, ಅತಿಕಾಯ, ಇಂದ್ರಜಿತು, ಕೋಟಿ ಚೆನ್ನಯದ ಕೋಟಿ ಮೊದಲಾದ ವೇಷಗಳಲ್ಲಿ ಮಿಂಚಿದ್ದಾರೆ. ತಮ್ಮದೇ ಆದ ನಿರ್ವಹಣೆಯಲ್ಲಿ ಪೆರುವಾಯಿ ಶೈಲಿ ಎಂಬ ಹೊಸ ಪ್ರಕಾರವನ್ನು ಸೃಷ್ಟಿಸಿ ಜನರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಮದನಪ್ಪ ಶೆಟ್ಟಿ ಮತ್ತು ಅಬ್ಬಕ್ಕ ದಂಪತಿಗೆ ಬಂಟ್ವಾಳದ ಪೆರುವಾಯಿಯಲ್ಲಿ ಜನನ. ಕುಂಡಾವು, ಧರ್ಮಸ್ಥಳ, ಕರ್ನಾಟಕ, ಪೊಳಲಿ ರಾಜರಾಜೇಶ್ವರಿ ಮೇಳ, ಕದ್ರಿ, ಕುಂಬಳೆ, ಕುಂಟಾರು, ಕಟೀಲು ಹೀಗೆ ವಿವಿಧ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ಮಾಡಿದ್ದಾರೆ.

ತಮ್ಮ 12 ನೇ ವಯಸ್ಸಿನಲ್ಲಿಯೇ ರಂಗಪ್ರವೇಶವನ್ನು ಮಾಡಿದ್ದ ಶೆಟ್ತರು, ಪೈವಳಿಕೆಯ ದಿ. ಐತಪ್ಪ ಶೆಟ್ಟಿ ದಿ. ಅಳಕೆ ರಾಮಯ್ಯ ರೈ ಹಾಗೂ ಕುಡಾಣ ಗೋಪಾಲಕೃಷ್ಣಭಟ್ಟರಿಂದಲೂ ತೆಂಕುತಿಟ್ಟು ಯಕ್ಷಗಾನದ ನಾಟ್ಯಾಭ್ಯಾಸ ಹಾಗೂ ಅಭಿನಯವನ್ನು ಕಲಿತಿದ್ದಾರೆ. ತುಳು-ಕನ್ನಡ ಎರಡು ಪ್ರಕಾರಗಳಲ್ಲೂ ಮಿಂಚಿದ್ದಾರೆ.

ಮೃತರು ಬಂಧುವರ್ಗ ಮತ್ತು ಕಲಾಭಿಮಾನಿಗಳನ್ನು ಅಗಲಿದ್ದಾರೆ.