ಜ.16 ರಂದು ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ನವೀಕೃತ ಮಂದಿರ ಮಠ ಲೋಕಾರ್ಪಣೆ; ವಿಗ್ರಹ ಪ್ರತಿಷ್ಠೆ

ಉಡುಪಿ: ನಗರದ ಕೆ.ಎಂ ಮಾರ್ಗದಲ್ಲಿ ಅಮೂಲಾಗ್ರ ಜೀರ್ಣೋದ್ಧಾರಗೊಂಡ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಪ್ರತಿಷ್ಠಾಪಿಸಲ್ಪಡುವ ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹದ ಮೆರವಣಿಗೆಯು ಜ 15 ರಂದು ನಡೆಯಲಿದ್ದು, ಜ 16 ರಂದು ನವೀಕೃತ ಮಂದಿರ ಲೋಕಾರ್ಪಣೆ, ಗರ್ಭಗೃಹ ಸಮರ್ಪಣೆ, ಗುರುಗಳ ವಿಗ್ರಹ ಪ್ರತಿಷ್ಠೆ ಧಾರ್ಮಿಕ ಸಭೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.

ಮಂದಿರದ ಹಿನ್ನೆಲೆ

ಉಡುಪಿ ಮೂಲದ ಮುಂಬಯಿ ನಿವಾಸಿ ಶ್ರೀ ನಿತ್ಯಾನಂದ ಸ್ವಾಮಿಯವರ ಭಕ್ತೆ ಸಾಧ್ವಿ ಸೀತಮ್ಮ ಶೆಟ್ಟಿಯವರು ಸದ್ಗುರು ಶ್ರೀ ಜನಾನಂದ ಸ್ವಾಮಿಯವರ ಮೂಲಕ 1961ರ ನ. 24ರಂದು ಮಂದಿರ ಮಠವನ್ನು ಸ್ಥಾಪಿಸಿದರು. ಸ್ವಾಮಿಯ ಪರಮ ಭಕ್ತರಾದ ಉಡುಪಿಯ ಬೋಳ ಪೂಜಾರಿ, ದುಗ್ಗಣ್ಣ ಶೆಟ್ಟಿ, ವಾಸುದೇವ ಮಾಸ್ಟರ್, ಲೋಕಯ್ಯ ಮಡಿವಾಳ, ಪದ್ಮನಾಭ ನಾಯಕ್ ಮೊದಲಾದವರು ಸೇರಿ ನಿರಂತರ ಭಜನೆಯಲ್ಲಿ ತೊಡಗಿಸಿಕೊಂಡಿದ್ದರು. ಜೀರ್ಣಾವಸ್ಥೆಗೆ ತಲುಪಿದ ಮಂದಿರವನ್ನು ಜೀರ್ಣೋದ್ಧಾರ ಮಾಡಬೇಕೆಂದು ನಿರ್ಣಯಿಸಿ ಭಕ್ತರು ಹಲವು ಬಾರಿ ಸಮಿತಿಗಳನ್ನು ರಚಿಸಿದರೂ ಕಾಲ ಕೂಡಿ ಬಂದಿರಲಿಲ್ಲ. 2021ರ ಡಿ. 24ರಂದು ಜೀರ್ಣೋದ್ಧಾರ ನಡೆಸುವ ಬಗ್ಗೆ ಬೆಂಗಳೂರಿನಲ್ಲಿ ಕೋಡೆ ಕುಟುಂಬದ ರಾಮಚಂದ್ರ ಕೋಡೆಯವರ ನೇತೃತ್ವದಲ್ಲಿ ಕಾಂಞಂಗಾಡಿನ ನಿತ್ಯಾನಂದ ಟ್ರಸ್ಟ್ ನ ಸಭೆ ನಡೆಯುತ್ತಿರುವಾಗ ಶ್ರೀ ಸಾಯಿಬಾಬಾ ಮತ್ತು ಶ್ರೀ ನಿತ್ಯಾನಂದ ಸ್ವಾಮಿಗಳ ಭಕ್ತ ಕೊಡವೂರು ಶ್ರೀ ಸಾಯಿಬಾಬಾ ಮಂದಿರದ ಮುಖ್ಯಸ್ಥ ಕೊಡವೂರು ದಿವಾಕರ ಶೆಟ್ಟಿಯವರಿಗೆ ಶ್ರೀ ನಿತ್ಯಾನಂದ ಸ್ವಾಮಿಗಳ ಪರಮ ಭಕ್ತರೊಬ್ಬರು ದೂರವಾಣಿ ಕರೆ ಮಾಡಿ ‘ನನಗೆ ಕಾಂಞಂಗಾಡಿನ ನಿತ್ಯಾನಂದ ಸ್ವಾಮಿಗಳ ಮೂಲ ಮಠದ ದರ್ಶನ ಪಡೆಯಬೇಕು ಎಂದಾಗ, ದಿವಾಕರ ಶೆಟ್ಟಿಯವರು ಕಾಂಞಂಗಾಡಿನ ಗಣಪತಿಯವರ ಮೂಲಕ ಸ್ವಾಮಿಯ ದರ್ಶನಕ್ಕೆ ವ್ಯವಸ್ಥೆ ಮಾಡಿಸಿದರು. ಸ್ವಾಮಿ ದರ್ಶನ ಪಡೆದ ಮಹಾನ್ ಭಕ್ತ ಮುಂಬಯಿಯ ಉದ್ಯಮಿ ಕೆ.ಕೆ. ಆವರ್ಸೇಕರ್ ಆಗಿದ್ದರು.

ಗಣೇಶಪುರಿಯ ಸಮಾಧಿ ಮಂದಿರ ದರ್ಶನ ಪಡೆದ ಕೆ.ಕೆ. ಆವರ್ಸೇಕರ್ ಮರುದಿನ ಉಡುಪಿಗೆ ಬಂದು ದಿವಾಕರ ಶೆಟ್ಟಿಯವರನ್ನು ಭೇಟಿ ಮಾಡಿದರು. ಅನಂತರ ದಿವಾಕರ ಶೆಟ್ಟಿಯವರು ಉಡುಪಿಯ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠಕ್ಕೆ ಕರೆದುಕೊಂಡು ಬಂದು ಸ್ವಾಮಿಯ ದರ್ಶನ ಮಾಡಿಸಿ, ಗಣೇಶಪುರಿಯ ಸಮಾಧಿ ಮಂದಿರದ ಮಾದರಿಯಲ್ಲಿ ಈ ಮಂದಿರ ಮಠದ ಜೀರ್ಣೋದ್ಧಾರ ಸಂಕಲ್ಪ ಹೊಂದಿದ್ದೇವೆ ಎಂದು ಆವರ್ಸೇಕರ್ ಅವರಿಗೆ ತಿಳಿಸಿದರು.

ದೈವೀ ಸಂಕಲ್ಪ

ಆಗ ಆವರ್ಸೇಕರ್ ಅವರು ದಿವಾಕರ ಶೆಟ್ಟಿಯವರಲ್ಲಿ ‘ಈ ಮಠ ಮಂದಿರದ ಜೀರ್ಣೋದ್ಧಾರದ ಸಮಯ ಹತ್ತಿರ ಬಂದಿದೆ. ಈ ಮಂದಿರವನ್ನು ನನ್ನ ಸ್ವಂತ ಖರ್ಚಿನಿಂದಲೇ ಮಾಡಲು ಇಚ್ಚಿಸಿದ್ದೇನೆ ‘ಎಂದಾಗ, ಸ್ವಾಮಿಯೇ ಇವರನ್ನು ಕಳುಹಿಸಿರಬೇಕೆಂದು ನಿರ್ಧರಿಸಿ ದಿವಾಕರ ಶೆಟ್ಟಿಯವರು ಒಪ್ಪಿಗೆ ಸೂಚಿಸಿದರು. ಅನಂತರ ದಿವಾಕರ ಶೆಟ್ಟಿಯವರು ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಜೀರ್ಣೋದ್ಧಾರ ಸಮಿತಿ ರಚಿಸಿ, ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಡಿಯಿಟ್ಟರು. ಇದೀಗ ಕೆ.ಕೆ. ಆವರ್ಸೇಕರ್ ಮತ್ತು ಭಕ್ತರ ಸಹಕಾರದಿಂದ ಮಂದಿರದ ಜೀರ್ಣೋದ್ಧಾರ ಕಾರ್ಯ ನಡೆದು ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.