ಧಾರ್ಮಿಕ ಆಚರಣೆಗಳು ಯುವಜನತೆಯ ಸದಾಚಾರ ಸಂಸ್ಕೃತಿ ಬೆಳವಣಿಗೆಗೆ ಸಹಕಾರಿ: ಕಿನ್ನಿಮುಲ್ಕಿ ಶಾರದೋತ್ಸವ ಪೂರ್ವಭಾವಿ ಸಭೆಯಲ್ಲಿ ಶಾಸಕ ಯಶಪಾಲ್ ಸುವರ್ಣ

ಉಡುಪಿ: ಧಾರ್ಮಿಕ ಆಚರಣೆಗಳು ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿತಗೊಂಡ ಯುವಜನತೆಯಲ್ಲಿ ಸದಾಚಾರ, ಸನ್ನಡತೆ, ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರೇರಣೆ ನೀಡುತ್ತದೆ ಹಾಗೂ ಅವರನ್ನು ಸುಸಂಸ್ಕೃತ ಭಾರತೀಯ ನಾಗರಿಕರಾಗಿ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಾಸಕರಾದ ಸುವರ್ಣರವರು ಅಭಿಮತ ವ್ಯಕ್ತಪಡಿಸಿದರು.

ಅವರು ಭಾನುವಾರ ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ವಠಾರ ದಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ರಿ., ಉಡುಪಿ ಜಿಲ್ಲೆ ಇವರ ವತಿಯಿಂದ ಉಡುಪಿ ಶಾರದೆಯ ನವಮ ವರ್ಷದ ಶ್ರೀ ಶಾರದಾ ಮಹೋತ್ಸವವು ದಿನಾಂಕ 17-10-2026 ಶನಿವಾರದಿಂದ 20-10-2026 ಮಂಗಳವಾರ ವರೆಗೆ ನಡೆಯಲಿದ್ದು, ಆ ಬಗ್ಗೆ ಸಮಿತಿಯ ದ್ವಿತೀಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕರು ಶಾರದೋತ್ಸವ ಆಚರಣೆಯ ಸಂಪೂರ್ಣ ತಯಾರಿ ಮತ್ತು ರೂಪುರೇಷೆಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಕಿನ್ನಿ ಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೆಸರಸರರಾದ ಪ್ರಭಾಶಂಕರ್ ಪದ್ಮಶಾಲಿ ರವರು ಉಪಸ್ಥಿತರಿದ್ದರು.

ಸಮಿತಿಯ ಅಧ್ಯಕ್ಷರಾದ ನಾಗಭೂಷಣ್ ಶೇಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷರಾದ ಜಯಪ್ರಕಾಶ್ ಕೆದ್ಲಾಯರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪಾಧ್ಯಕ್ಷರಾದ ದೇವದಾಸ್ ವಿ ಶೆಟ್ಟಿಗಾರ್ರ ವರು ಸ್ವಾಗತಿಸಿದರು. ಕೋಶಾಧಿಕಾರಿ ರಾಜಶಂಕರ್ ಎ ವಂದಿಸಿದರು. ನಾಗರಾಜ್ ಕಿನ್ನಿಮುಲ್ಕಿಯವರು ನಿರೂಪಿಸಿದರು.