ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಂತೆ ಸರ್ವ ಧರ್ಮ ಮುಖಂಡರಿಂದ ಮನವಿ

 

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಗದ್ದಲದ ಮಧ್ಯೆ, ಶನಿವಾರ ವಿವಿಧ ಧರ್ಮಗಳ ಪ್ರಮುಖ ಧಾರ್ಮಿಕ ಮುಖಂಡರು ಸಾಮರಸ್ಯ ಮತ್ತು ಶಾಂತಿಯಿಂದ ಬದುಕುವಂತೆ ಜನರಲ್ಲಿ ಮನವಿ ಮಾಡಿದರು. ಬೆಂಗಳೂರಿನಲ್ಲಿ ಅನೌಪಚಾರಿಕ ಸಭೆ ನಡೆಸಿದ ಸರ್ವ ಧರ್ಮಗಳ ಧಾರ್ಮಿಕ ಮುಖಂಡರು, ಹಿಂದೆಂದಿಗಿಂತಲೂ ಸಮಾಜಕ್ಕೆ ಈಗ ಶಾಂತಿಯ ಅಗತ್ಯ ಹೆಚ್ಚಿದೆ ಎಂದರು.

ಚಿತ್ರದುರ್ಗ ಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, “ಈ ಹಿಜಾಬ್ ವಿವಾದವು ರಾಜ್ಯದ ಜಾತ್ಯತೀತ ರಚನೆಗೆ ಅಡ್ಡಿಪಡಿಸುವ ಮಾನವ ನಿರ್ಮಿತ ಸಂಘರ್ಷವಾಗಿದೆ. ಡ್ರೆಸ್ ಕೋಡ್ ವಿವಾದವು ರಾಜ್ಯಾದ್ಯಂತ ಸಾಮಾಜಿಕ ಅಶಾಂತಿಗೆ ಕಾರಣವಾಗಿದೆ ಮತ್ತು ಪ್ರಬುದ್ಧ ಜನರಾದ ನಾವು ಈ ಬಿಕ್ಕಟ್ಟನ್ನು ಶಾಂತಿಯುತವಾಗಿ ಪರಿಹರಿಸಬೇಕು. ನಾವೆಲ್ಲರೂ ಸೌಹಾರ್ದತೆ ಮತ್ತು ಶಾಂತಿಯಿಂದ ಬದುಕುತ್ತಿದ್ದೇವೆ” ಎಂದರು.

ನಾಸ್ ಫೌಂಡೇಶನ್‌ನ ಅಧ್ಯಕ್ಷ ಮೌಲಾನಾ ಶಬೀರ್ ನಖ್ವಿ ಮಾತನಾಡಿ, ದ್ವೇಷದ ಭಾಷಣಗಳು ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನಾಗರಿಕರಲ್ಲಿ ಮನವಿ ಮಾಡಿದರು. ಸಮುದಾಯಗಳ ನಡುವೆ ಬಿರುಕು ಮೂಡಿಸಲು ವಿದ್ಯಾರ್ಥಿಗಳನ್ನು ಕೋಮುವಾದದ ನೆಲೆಯಲ್ಲಿ ಪ್ರಚೋದಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಮೌಲಾನಾ ಸುಲೇಮಾನ್ ಖಾನ್ ಅವರು ಕರ್ನಾಟಕ ಮತ್ತು ದೇಶದ ಇತರ ಭಾಗಗಳಲ್ಲಿ ಹಿಂದೂ-ಮುಸ್ಲಿಂ ಏಕತೆಯ ಹಲವಾರು ನಿದರ್ಶನಗಳಿವೆ ಎನ್ನುವುದನ್ನು ನೆನಪಿಸಿದರು.