ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ಕುಂದಾಪುರ: ಇಲ್ಲಿನ ಪ್ರಸಿದ್ದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಡಿ.16 ರಂದು ಬ್ರಹ್ಮರಥೋತ್ಸವ ಹಾಗೂ ಅಷ್ಟೋತ್ತರ ಸಹಸ್ರ ನಾರಿಕೇಳ ಗಣಯಾಗದ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೀಪ ಬೆಳಗುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯಿತು.

ರಥೋತ್ಸವ ಪ್ರಯುಕ್ತ ಬುಧವಾರದಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ತಿವಾಚನ, ಗಣಹೋಮ, ಅಥರ್ವಶೀರ್ಷ, ಉಪನಿಷತ್ ಹೋಮ, ಸತ್ಯಗಣಪತಿ ವೃತ, ಮಹಾಪೂಜೆ, ರಂಗಪೂಜೆ, ಡೋಲಾರೋಹಣ, ಪಲ್ಲಕ್ಕಿ ಉತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿಗಳಾದ ಕೆ. ರಮಣ ಉಪಾಧ್ಯಾಯ, ಕೆ.ಸೂರ್ಯ ನಾರಾಯಣ ಉಪಾಧ್ಯಾಯ, ಕೆ.ನಿರಂಜನ್ ಉಪಾಧ್ಯಾಯ ಹಾಗೂ ವಿಠ್ಠಲ ಉಪಾಧ್ಯಾಯ, ಅರ್ಚಕ ಕೆ.ಶ್ರೀಶ ಉಪಾಧ್ಯಾಯ, ನಿರ್ವಾಹಕ ನಟೇಶ್ ಕಾರಂತ್, ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು.

ಸಾಯಂಕಾಲ ಹಂಗಳೂರು ಓಂಕಾರ ನಾಟ್ಯ ಬಳಗದಿಂದ ಕೋಲಾಟ ಭಜನಾ ನೃತ್ಯ, ಜಾನಪದ ನೃತ್ಯ ಹಾಗೂ ಹೆರ್ಗದ ಸರ್ವಪ್ರಿಯ ಮಹಿಳಾ ಯಕ್ಷ ಬಳಗದಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗ ನಡೆಯಿತು.

ದೇವಾಲಯವನ್ನು ವಿದ್ಯುತ್ ದೀಪಗಳಿಂದ ಹಾಗೂ ಹೂವುಗಳಿಂದ ಅಲಂಕರಿಸಿ ಸಿಂಗರಿಸಲಾಗಿತ್ತು.