ವೇದಗಳಲ್ಲಿ ಉಲ್ಲೇಖಿತ ಸರಸ್ವತಿ ನದಿಯ ಪುನಶ್ಚೇತನ ಅಗತ್ಯ: ಜಗದೀಶ ಗಾಂಧಿ

ಮಣಿಪಾಲ: ವೇದಗಳಲ್ಲಿ ಉಲ್ಲೇಖಿಸಲ್ಪಟ್ಟ ‘ಸರಸ್ವತಿ’ ನದಿಯ ಪಾತ್ರವು ಸೆಟಲೈಟ್ ಚಿತ್ರಗಳ ಮೂಲಕ ಲಭ್ಯವಿದ್ದು, ಅದರ ಪುನಃಶ್ಚೇತನದ ಅಗತ್ಯವಿದೆ ಎಂದು ಹಿರಿಯ ಸಂಶೋಧಕ ಜಗದೀಶ ಗಾಂಧಿ ಅಭಿಪ್ರಾಯಪಟ್ಟರು.

ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಎಂಡ್ ಸೈನ್ಸಸ್ ಮತ್ತು ರೋಟರಿ, ಮಣಿಪಾಲ ಜಂಟಿಯಾಗಿ ಆಯೋಜಿಸಿದ್ದ ಗೋಷ್ಠಿಯಲ್ಲಿ ‘ಸರಸ್ವತಿ ರಿವರ್ ವಾಟರ್ ಆಂಡ್ ಎನ್ವಿರಾನ್ಮೆಂಟ್’ ವಿಷಯದ ಕುರಿತು ಮಾತನಾಡಿದರು.

ನಾಲ್ಕು ಸಾವಿರ ವರ್ಷಗಳ ಹಿಂದೆ, ಬೌಗೋಳಿಕ ಕಾರಣಗಳಿಗಾಗಿ ತನ್ನ ಪಾತ್ರವನ್ನು ಬದಲಾಯಿಸಿದ ಸರಸ್ವತಿ ನದಿಯು ಇಂದು ಗುಪ್ತಗಾಮಿನಿಯಾಗಿ ಹರಿದು ಪ್ರಯಾಗದ ತ್ರಿವೇಣಿ ಸಂಗಮವನ್ನು ಸೇರುತ್ತದೆ ಎಂದು ತಮ್ಮ ಸಂಶೋಧನೆಗಳನ್ನು ಉಲ್ಲೇಖಿಸಿ ಪ್ರತಿಪಾದಿಸಿದರು. ಇಂದು ಬತ್ತಿದಂತೆ ಕಾಣುತ್ತಿರುವ ಈ ಮಹತ್ವದ ನದಿಯ ಪುನಶ್ಚೇತನವು ರಾಜಸ್ಥಾನದ ಮರುಭೂಮಿಗಳಿಗೆ ನೀರುಣಿಸುವ ಕಾರ್ಯಸಾಧ್ಯ ಪ್ರಯತ್ನವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಜಿಸಿಪಿಎಎಸ್ ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಕಾರ್ಯಕ್ರಮವನ್ನು ಸಂಯೋಜಿಸಿದರು. ರೋಟರಿಯ ದೇವಾನಂದ್ ಸಿಎ, ಡಾ ಮನೋಜ್ ನಾಗಸಂಪಿಗೆ, ಸಚ್ಚಿದಾನಂದ ನಾಯಕ್, ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.