ಉಡುಪಿ: ಸರ್ಕಾರಿ ಯೋಜನೆಗಳ ಫಲಾನುಭವಿಗಳು ಸಲ್ಲಿಸುವ ಅರ್ಜಿಗಳನ್ನು ಸಣ್ಣಪುಟ್ಟ ಕಾರಣಗಳಿಗೆ ತಿರಸ್ಕರಿಸದೆ ಅವುಗಳನ್ನು ಪುನರ್ ಪರಿಶೀಲನೆ ನಡೆಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಹಾಗೂ ಸೂಕ್ತ ದಾಖಲೆಗಳ ಅಗತ್ಯವಿದ್ದಲ್ಲಿ ಫಲಾನುಭವಿಗಳಿಂದ ಅವುಗಳನ್ನು ಪಡೆದು ಸಾಲವನ್ನು ಮಂಜೂರು ಮಾಡುವ ಮೂಲಕ ಎಲ್ಲ ಬ್ಯಾಂಕ್‌ಗಳು ಸರ್ಕಾರಿ ಯೋಜನೆಗಳ ಗುರಿ ಸಾಧನೆಗೆ ನೆರವು ನೀಡಬೇಕು ಎಂದು ಜಿ.ಪಂಚಾಯತ್ ಸಿ.ಇ.ಒ ಪ್ರಸನ್ನ ಬ್ಯಾಂಕ್ ಅಧಿಕಾರಿಗಳಿಗೆ ಹೇಳಿದರು.
ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಇಲಾಖೆಯ ಮೂಲಕ ಸಲ್ಲಿಕೆಯಾಗುತ್ತಿರುವ ರೈತರ ಸಾಲದ ಅರ್ಜಿಗಳನ್ನು ತಿರಸ್ಕರಿಸುವುದು ಹಾಗೂ ನಿಗದಿಗಿಂತ ಹೆಚ್ಚಿನ ಅವಧಿವರೆಗೆ ಅರ್ಜಿಗಳನ್ನು ಬಾಕಿ ಇಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಿ.ಇ.ಒ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಮತ್ತು ಕೃಷಿಯ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಬ್ಯಾಂಕ್‌ಗಳು ಈ ಯೋಜನೆಗಳ ಪ್ರಗತಿಗೆ ಅಗತ್ಯ ಆರ್ಥಿಕ ಸೌಲಭ್ಯಗಳನ್ನು ಮಂಜೂರು ಮಾಡುವುದರ ಜೊತೆಗೆ ರೈತರನ್ನು ಬ್ಯಾಂಕ್‌ಗಳಿಗೆ ಅನಗತ್ಯವಾಗಿ ಅಲೆದಾಡಿಸದೇ ಶೀಘ್ರದಲ್ಲಿ ಅವರ ಅರ್ಜಿಗಳನ್ನು ವಿಲೇವಾರಿ ಮಾಡುವುದರ ಮೂಲಕ ರೈತ
ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ ಮಾತನಾಡಿ, 2 ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತದ ಯಾವುದೇ ಸಾಲಗಳನ್ನು ಬ್ಯಾಂಕ್ ಮ್ಯಾನೇಜರ್ ಹಂತದಲ್ಲಿ ತಿರಸ್ಕರಿಸಲು ಸಾಧ್ಯವಿಲ್ಲ. ಸಂಬಂಧಿಸಿದ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಮಾತ್ರ ತಿರಸ್ಕರಿಸಬಹುದು ಎಂದರು.
ರಿಸರ್ವ್ ಬ್ಯಾಂಕ್ ಕಾರ್ಯನಿರ್ವಾಹಕ ತನು ನಂಜಪ್ಪ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು, ಸಾಲ ವಸೂಲಾತಿಗಾಗಿ ನೇಮಿಸಿಕೊಂಡಿರುವ ರಿಕವರಿ ಏಜೆಂಟ್‌ಗಳು ಗ್ರಾಹಕರಿಗೆ ಅನಗತ್ಯ ಕಿರುಕುಳ, ಅಶ್ಲೀಲ ಮೆಸೇಜ್ ಕಳುಹಿಸುವುದು, ಸಾಮಾಜಿಕ ಜಾಲ ತಾಣದಲ್ಲಿ ನಿಂದನೆ ಮಾಡುವುದರ ವಿರುದ್ಧ ರಿಸರ್ವ್ ಬ್ಯಾಂಕ್ ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದು, ಸಾಲ ವಸೂಲಾತಿ ಕುರಿತಂತೆ ಸಂಜೆ 7 ಗಂಟೆಯ ನಂತರ ಗ್ರಾಹಕರನ್ನು ಸಂಪರ್ಕಿಸಬಾರದು ಎಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕ ವ್ಯವಹಾರದಲ್ಲಿ 10 ರೂ. ಗಳ ಕಾಯಿನ್ ಬಳಕೆಯನ್ನು ರಿಸರ್ವ್ ಬ್ಯಾಂಕ್ ಎಲ್ಲೂ ನಿರ್ಬಂಧಿಸಿಲ್ಲ. ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬದೇ ತಮ್ಮ ದಿನನಿತ್ಯದ ವ್ಯವಹಾರದಲ್ಲಿ 10 ರೂ. ಗಳ ನಾಣ್ಯಗಳ ಚಲಾವಣೆಯನ್ನು ನಡೆಸುವಂತೆ ತಿಳಿಸಿದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಮ್ಯಾನೇಜರ್ ಲೀನಾ ಪಿಂಟೋ ಮಾತನಾಡಿ, ಜೂನ್ ತ್ರೈಮಾಸಿಕ ಅಂತ್ಯಕ್ಕೆ ಜಿಲ್ಲೆಯಲ್ಲಿ ಸಾಲ ವಿತರಣೆಯ ಪ್ರಮಾಣ ಉತ್ತಮವಾಗಿದ್ದು, 2479 ಕೋಟಿ ರೂ. ಸಾಲ ವಿತರಿಸಿದ್ದು, ವಾರ್ಷಿಕ 19.58% ಸಾಧನೆ ಆಗಿದೆ. ಕೃಷಿ ಕ್ಷೇತ್ರಕ್ಕೆ 589.68 ಕೋಟಿ ರೂ., ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯಕ್ಕೆ 501.10 ಕೋಟಿ ರೂ., ಶೈಕ್ಷಣಿಕ ವಲಯಕ್ಕೆ 12.96 ಕೋಟಿ ರೂ. ಹಾಗೂ ವಸತಿ ವಲಯಕ್ಕೆ 93.55 ಕೋಟಿ ರೂ. ಸಾಲ ವಿತರಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತವು 48.86% ಆಗಿದ್ದು, ಈ ಅನುಪಾತವು 50% ಆಗುವ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್‌ಗಳು ಕಾರ್ಯನಿರ್ವಹಿಸಬೇಕು ಎಂದರು.
ನಬಾರ್ಡ್ ಬ್ಯಾಂಕ್‌ನ ಪ್ರಾದೇಶಿಕ ಉಪ ಪ್ರಬಂಧಕಿ ಸಂಗೀತಾ ಕಾರ್ಥಾ, ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಡಾ.ವಾಸಪ್ಪ, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್‌ಗಳ ಮ್ಯಾನೇಜರ್‌ಗಳು ಉಪಸ್ಥಿತರಿದ್ದರು.