ಮಣಿಪಾಲ ಆರೋಗ್ಯಕಾರ್ಡ್ 2022ರ ನೋಂದಾವಣೆ ಪ್ರಕ್ರಿಯೆಗೆ ರಘುಪತಿ ಭಟ್ ರಿಂದ ಚಾಲನೆ

ಮಣಿಪಾಲ: 2022ರ ಸಾಲಿನ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಾವಣೆಗೆ ಜೂನ್ 4 ರಂದು ಚಾಲನೆ ನೀಡಲಾಯಿತು. ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ದೊರಕಿಸಿಕೊಡುವ ಉದ್ದೇಶದಿಂದ ಮಣಿಪಾಲ ಆರೋಗ್ಯಕಾರ್ಡ್ ಅನ್ನು ಪ್ರಾರಂಭಿಸಲಾಯಿತು.

ಕಾರ್ಡುದಾರರು ಮಣಿಪಾಲ, ಕಾರ್ಕಳ, ಮಂಗಳೂರು, ಗೋವಾ ಮತ್ತು ಕಟೀಲ್‌ನಲ್ಲಿರುವ ಮಣಿಪಾಲ ಗುಂಪಿನ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಚಿಕಿತ್ಸೆಗಳಿಗೆ ರಿಯಾಯಿತಿ ಪ್ರಯೋಜನಗಳನ್ನು ಪಡೆಯಬಹುದು.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮೊದಲ ಕಾರ್ಡ್ ಅನ್ನು ವಿತರಿಸುವುದರ ಮೂಲಕ ಮಣಿಪಾಲ ಆರೋಗ್ಯ ಕಾರ್ಡ್ 2022ರ ನೋಂದಾವಣೆಗೆ ಉಡುಪಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಅಧಿಕೃತ ಚಾಲನೆ ನೀಡಿದರು. ಬಳಿಕ ಮಾತನಾಡಿ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ರಾಜ್ಯದ ಪ್ರತಿಷ್ಠಿತ ಆಸ್ಪತೆಯಾಗಿದ್ದು, ದೂರದ ಅನೇಕ ಜಿಲ್ಲೆಗಳಿಂದ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಕೋವಿಡ್ ಸಮಯದಲ್ಲಿ ಉಡುಪಿಯ ಡಾ. ಟಿ ಎಂ ಎ ಪೈ ಆಸ್ಪತ್ರೆಯನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿಯೇ ಮೀಸಲಿರಿಸಿದ್ದ ಆಡಳಿತ ಮಂಡಳಿಯನ್ನು ಅಭಿನಂದಿಸಿದ ಅವರು, ಕಳೆದ 21 ವರ್ಷಗಳಿಂದ ಮಣಿಪಾಲ ಆರೋಗ್ಯಕಾರ್ಡ್ ಯೋಜನೆಯ ಮೂಲಕ ಲಕ್ಷಾಂತರ ಜನರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಚಿಕಿತ್ಸೆ ನೀಡುತ್ತಿರುವ ಕ್ರಮವನ್ನು ಶ್ಲಾಘಿಸಿದರು.

ಮಣಿಪಾಲ್ ಆರೋಗ್ಯ ಕಾರ್ಡ್ ಹೊಂದಿರುವವರಿಗೆ ತಜ್ಞ ಮತ್ತು ವಿಶೇಷ ತಜ್ಞ ವೈದ್ಯರ ಸಮಾಲೋಚನೆ ಶುಲ್ಕದಲ್ಲಿ ಶೇಕಡಾ 50 ರಿಯಾಯಿತಿ (ಒ ಪಿ ಡಿ ಮತ್ತು ನಾನ್ ಒ ಪಿ ಡಿ ದಿನಗಳಂದು ) ಹೊರರೋಗಿ ಪ್ರಯೋಗಾಲಯ ಪರೀಕ್ಷೆ ಶೇಕಡಾ 30 ರಿಯಾಯಿತಿ, ಹೊರರೋಗಿ ರೇಡಿಯಾಲಜಿ ಪರೀಕ್ಷೆಗಳು (ಸಿ ಟಿ, ಎಂ ಆರ್ ಐ, ಅಲ್ಟ್ರಾಸೌಂಡ್ ಇತ್ಯಾದಿ), ಶೇಕಡಾ 20 ರಿಯಾಯಿತಿ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ ಶೇಕಡಾ 20 ರಿಯಾಯಿತಿ, ಹೊರರೋಗಿ ಡಯಾಲಿಸಿಸ್ ₹100, ಔಷಧಾಲಯಗಳಲ್ಲಿ ಶೇಕಡಾ 12ರವರೆಗೆ ರಿಯಾಯಿತಿ, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ ಶೇಕಡಾ 25 ರಿಯಾಯಿತಿ ದೊರೆಯಲಿದೆ.

ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವ ಶುಲ್ಕವು ಒಬ್ಬರಿಗೆ ₹ 300/- ಕೌಟಂಬಿಕ ಕಾರ್ಡ್ ನಲ್ಲಿ ಕಾರ್ಡುದಾರ, ಅವರ ಸಂಗಾತಿ 25 ವರ್ಷದ ಒಳಗಿನ ಮಕ್ಕಳಿಗೆ ₹ 600/- ಮತ್ತು ಕುಟುಂಬ ಪ್ಲಸ್ ಯೋಜನೆಯಲ್ಲಿ ಕಾರ್ಡುದಾರ, ಅವರ ಸಂಗಾತಿ, 25 ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರು (ತಂದೆ, ತಾಯಿ, ಅತ್ತೆ ಮತ್ತು ಮಾವ) ₹ 750/- , ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ ₹ 500/-, ಕುಟುಂಬಕ್ಕೆ ₹ 800/- ಮತ್ತು ಕೌಟಂಬಿಕ ಪ್ಲಸ್ ಯೋಜನೆಗೆ ₹ 950/- ಆಗಿರುತ್ತದೆ.

ಅಧ್ಯಕ್ಷೀಯ ಭಾಷಣದಲ್ಲಿ, ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, “ಕಳೆದ 21 ವರ್ಷಗಳಿಂದ ನಾವು ಸಾಮಾಜಿಕ ಕಾಳಜಿಯೊಂದಿಗೆ ರಿಯಾಯಿತಿ ದರದಲ್ಲಿ ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಸದಸ್ಯರ ನೋಂದಾವಣೆ ಹೆಚ್ಚುತ್ತಿರುವುದು ಮಣಿಪಾಲ ಆರೋಗ್ಯ ಕಾರ್ಡ್‌ನ ಜನಪ್ರಿಯತೆಯನ್ನು ತೋರಿಸುತ್ತದೆ. ಕಾರ್ಡ್ ಖರೀದಿಸಲು ಹೂಡಿಕೆ ಮಾಡಿದ ಹಣವನ್ನು ಕೇವಲ ಎರಡು ಅಥವಾ ಮೂರು ಸಲದ ಬಳಕೆಗಳಲ್ಲಿ ರಿಯಾಯಿತಿಯ ರೂಪದಲ್ಲಿ ಹಿಂದೆ ಪಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಆಗಮಿಸಿದ್ದ ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಮಾತನಾಡಿ, 2022ರ ಮಣಿಪಾಲ ಆರೋಗ್ಯಕಾರ್ಡ್ ಯೋಜನೆ ಕುರಿತು ಅವಲೋಕನ ನೀಡಿ ‘2000ನೇ ಇಸವಿಯಲ್ಲಿಅವಿಭಜಿತ ದಕ್ಸಿಣ ಕನ್ನಡ ಜಿಲ್ಲೆಯ ಜನರಿಗೆ ಆರಂಭಿಸಿದ ಈ ಯೋಜನೆ ಇಂದು ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ , ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಸೇರಿದಂತೆ ಕರಾವಳಿ ಕರ್ನಾಟಕದ ಮತ್ತು ಮಧ್ಯ ಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಣೆ ಆಗಿದೆ. ಅಲ್ಲದೇ ಕೇರಳ, ಗೋವಾದಂತಹ ನೆರೆ ರಾಜ್ಯಗಳಿಗೂ ವಿಸ್ತರಣೆ ಆಗಿದೆ ಮತ್ತು ವರ್ಷದಿಂದ ವರ್ಷಕ್ಕೆ ನೋಂದಣಿ ಮಾಡಿಸಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ಈ ಸಲ ಹೊಸದಾಗಿ ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ಕೊಡುವುದರ ಮೂಲಕ ಅಥವಾ ಆರೋಗ್ಯ ಎಂದು ವಾಟ್ಸ್ ಆಪ್ ಸಂದೇಶ ಕಳುಹಿಸುವುದರ ಮೂಲಕ ಯಾವುದೇ ಸಮಯದಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

2021ರ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಣಿಪಾಲ ಆರೋಗ್ಯಕಾರ್ಡ್ ಪ್ರತಿನಿಧಿಯನ್ನು ವೈದ್ಯಕೀಯ ಮತ್ತು ದಂತ ವಿಜ್ಞಾನಗಳ ಸಹ ಕುಲಪತಿ ಡಾ.ಪಿ.ಎಲ್.ಎನ್.ಜಿ.ರಾವ್ ಮತ್ತು ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ ಉಪಕುಲಪತಿ ಡಾ ದಿಲೀಪ್ ಜಿ ನಾಯ್ಕ್ ಸನ್ಮಾನಿಸಿದರು. ಡಾ ವೆಂಕಟರಾಯ ಎಂ ಪ್ರಭು ಸಹ ಉಪಕುಲಪತಿ ಆರೋಗ್ಯ ವಿಜ್ಞಾನ ಇವರು, ಮಣಿಪಾಲ ಆರೋಗ್ಯಕಾರ್ಡ್ 2022ರ ಮಾಹಿತಿ ಕರ ಪತ್ರ ಬಿಡುಗಡೆ ಮಾಡಿದರು. ಮಣಿಪಾಲ ಕೆಎಂಸಿ ಡೀನ್ ಡಾ ಶರತ್ ಕೆ ರಾವ್ ಸ್ವಾಗತಿಸಿದರು, ಮಂಗಳೂರು ಕೆಎಂಸಿ ಡೀನ್ ಡಾ ಬಿ ಉನ್ನಿಕೃಷ್ಣನ್ ವಂದಿಸಿದರು. ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಮಣಿಪಾಲ ಮತ್ತು ಮಂಗಳೂರಿನ ಹಿರಿಯ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

ಸಾರ್ವಜನಿಕರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಎಲ್ಲಾ ನೆಟ್‌ವರ್ಕ್ ಆಸ್ಪತ್ರೆಗಳು ಮತ್ತು ಅಧಿಕೃತ ಪ್ರತಿನಿಧಿಗಳಲ್ಲಿ ಮಣಿಪಾಲ ಆರೋಗ್ಯಕಾರ್ಡ್ ಅನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ. 9980854700/ 08202923748 ಗೆ ಕರೆ ಮಾಡಬಹುದು.