ರಿಜಿಸ್ಟರ್ಡ್ ಪೋಸ್ಟ್ ಸೇವೆಗೆ ಬೈ ಬೈ ಹೇಳಿದ ಅಂಚೆ ಇಲಾಖೆ: ಸ್ಪೀಡ್ ಪೋಸ್ಟ್ ಜೊತೆ ವಿಲೀನ, ನಿರೀಕ್ಷಿತ ಸೇವೆ ಕೊಟ್ಟಿತೇ ಸ್ಪೀಡ್ ಪೋಸ್ಟ್?

ನವದೆಹಲಿ: ವಿಶ್ವದಲ್ಲಿಯೇ ನಂಬುಗೆಯ ಅಂಚೆ ಸೇವೆಯನ್ನು ನೀಡುತ್ತ ಬಂದಿರುವ ಭಾರತೀಯ ಅಂಚೆ ಇಲಾಖೆಯು ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದು ಇನ್ಮುಂದೆ ರಿಜಿಸ್ಟರ್ಡ್ ಪೋಸ್ಟ್ ಸೇವೆ ಸ್ಪೀಡ್ ಪೋಸ್ಟ್ ಸೇವೆ ಜೊತೆಗೆ ವಿಲೀನಗೊಳ್ಳಲಿದೆ.  ಸೆಪ್ಟೆಂಬರ್ 1 ಕ್ಕೆ ರಿಜಿಸ್ಟರ್ಡ್ ಪೋಸ್ಟ್​​ಗೆ ಅಂತಿಮ ವಿದಾಯ ಹೇಳಲಾಗುತ್ತಿದೆ.  ಹಾಗಾಗಿ ರಿಜಿಸ್ಟರ್ಡ್ ಪೋಸ್ಟ್ ಮಾಡಿ ಎಂದು ಅಂಚೆಇಲಾಖೆಯಲ್ಲಿ  ಗ್ರಾಹಕರು ಹೇಳುವ ದಿನಗಳು ಇನ್ನಿಲ್ಲ.  ಈ ಮೂಲಕ ರಿಜಿಸ್ಟರ್ಡ್ ಪೋಸ್ಟ್ ನ ಕಾಲ ಮುಕ್ತಾಯಗೊಂಡಿದೆ.

ಕೊರಿಯರ್​​ಗಳಿಗಿಂತಲೂ ಪೂರ್ವದಲ್ಲಿ ರಿಜಿಸ್ಟರ್ಡ್ ಪೋಸ್ಟ್ ಬಳಕೆ  ತುಂಬಾ ಇತ್ತು. ರಿಜಿಸ್ಟರ್ಡ್ ಪೋಸ್ಟ್ ಮಾಡಿದ್ದಲ್ಲಿ  ಆ ಪೋಸ್ಟ್ ಯಾರ ಹೆಸರಿಗೆ ಕಳಿಸಲಾಗಿದೆಯೋ ಅವರೇ ಸಹಿ ಹಾಕಿ ತೆಗೆದುಕೊಳ್ಳುವ ಸಾಧ್ಯತೆ ಇರುವುದರಿಂದ  ಸಂಬಂಧಪಟ್ಟವರಿಗೆ ಅಂಚೆ ತಲುಪಿದೆಯೋ ಇಲ್ಲವೋ ಗೊತ್ತಾಗುತ್ತಿತ್ತು. ಹಾಗಾಗಿ ಈ ಸೇವೆ ಜನಪ್ರಿಯವಾಗಿತ್ತು., ಮುಖ್ಯವಾದ ಅಂಚೆಗಳು, ದಾಖಲೆಗಳು, ಸಂದರ್ಶನ ಪತ್ರಗಳು,ನೋಟೀಸ್ ಇವೆಲ್ಲಾ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಬರುತ್ತಿದ್ದುವು. ಇದು ಸುರಕ್ಷಿತ ಎನ್ನುವ ನಂಬುಗೆಯೂ ಜನರಲ್ಲಿತ್ತು. ಇದೀಗ ಅಂಚೆ ಇಲಾಖೆ ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ನಿಲ್ಲಿಸಿ, ಅದನ್ನು ಸ್ಪೀಡ್ ಪೋಸ್ಟ್ ಜೊತೆ ವಿಲೀನ ಮಾಡಿರುವುದರಿಂದ ರಿಜಿಸ್ಟರ್ಡ್ ಪೋಸ್ಟ್ ಎನ್ನುವ ಪದ ಇನ್ನು ಮುಂದೆ ಕೇಳಲು ಸಾಧ್ಯವಿಲ್ಲ.ಸದ್ಯ  ಸ್ಪೀಡ್ ಪೋಸ್ಟ್ ಸೇವೆಯೂ ಉತ್ತಮವಾಗಿದೆ, ಆದರೆ  ಇನ್ನು ಮುಂದೆ ಇನ್ನಷ್ಟು ಜನಸ್ನೇಹಿಯಾಗಬಹುದು ಎನ್ನುವ ಲೆಕ್ಕಾಚಾರ ಗ್ರಾಹಕರದ್ದು. ಅಂಚೆ ಇಲಾಖೆ ಸೇವೆಗಳು ಕೊರಿಯರ್ ಗಳಿಗಿಂತಲೂ ದುಬಾರಿಯಾಗದಿರಲಿ , ನಂಬಿಕೆ ಉಳಿಸಲಿ ಎನ್ನುವುದು ಅಂಚೆ ಇಲಾಖೆಯ ಸೇವೆಗಳನ್ನು ಬಳಸುತ್ತಿರುವವರ ನಿರೀಕ್ಷೆಯಾಗಿದೆ.  ರಿಜಿಸ್ಟರ್ಡ್ ಪೋಸ್ಟ್,  ಸ್ಪೀಡ್ ಪೋಸ್ಟ್   ಜೊತೆ ವಿಲೀನಗೊಂಡಿರುವುದರಿಂದ ಸ್ಪೀಡ್ ಪೋಸ್ಟ್ ಸೇವೆ ಇನ್ನಷ್ಟು  ಉತ್ತಮಗೊಳ್ಳಬಹುದು ಎನ್ನುವ ಸಹಜ ನಿರೀಕ್ಷೆ ಎಲ್ಲರಲ್ಲಿದೆ. ಆ ನಿರೀಕ್ಷೆಯನ್ನು ಭಾರತೀಯ ಅಂಚೆ ಇಲಾಖೆ ಉಳಿಸಿಕೊಳ್ಳಬೇಕಷ್ಟೆ.