ಮಂಗಳೂರು ವಿಶ್ಯವಿದ್ಯಾನಿಲಯದ ಪದವಿಪೂರ್ವ ಪಠ್ಯಕ್ರಮದಲ್ಲಿ ಪ್ರಾದೇಶಿಕ ಇತಿಹಾಸ ಸೇರ್ಪಡೆ

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಅಂಗವಾಗಿ ದೇಶಾದ್ಯಂತ ಸ್ಥಳೀಯ ಇತಿಹಾಸ ಮತ್ತು ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಪ.ಪೂ ಪಠ್ಯಕ್ರಮದಲ್ಲಿ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿಯ ಸ್ಥಳಿಯ ಇತಿಹಾಸವನ್ನು ಸೇರಿಸಲಾಗಿಲ್ಲ ಎನ್ನುವ ಪುಕಾರು ಎದ್ದಿತ್ತು.

ಈ ಬಗ್ಗೆ ವಿಧಾನಸಭೆಯಲ್ಲಿ ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುತ್ತಿದ್ದರೂ ಇಲ್ಲಿನ ಸ್ಥಳೀಯ ಇತಿಹಾಸವನ್ನು ಪಠ್ಯದೊಳಗೆ ಸೇರಿಸಲಾಗಿಲ್ಲ. ಕಾಲೇಜಿನ ಆಡಳಿತ ಮಂಡಳಿಯ ನಿರ್ಲಕ್ಯದಿಂದಾಗಿ ಪದವಿಪೂರ್ವ ಹಂತದಲ್ಲಿ ಸ್ಥಳೀಯ ಇತಿಹಾಸವನ್ನು ಅಧ್ಯಯನ ಮಾಡುವ ಅವಕಾಶದಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ ಎಂದಿದ್ದರು.

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ ಅಶ್ವಥ್ ನಾರಾಯಣ್, ವಿಷಯವನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕಿಶೋರ್, ರಾಜ್ಯ ಸರ್ಕಾರ ನೀಡಿರುವ ಪಠ್ಯಕ್ರಮದ ಪ್ರಕಾರ ಕೇವಲ 20% ಪಠ್ಯವನ್ನಷ್ಟೇ ಬದಲಾಯಿಸುವ ಅವಕಾಶವನ್ನು ವಿಶ್ವವಿದ್ಯಾಲಯ ಹೊಂದಿತ್ತು. ಅದಕ್ಕಿಂತ ಹೆಚ್ಚಿನ ಬದಲಾವಣೆ ಮಾಡಬೇಕಾದಲ್ಲಿ ಇಡಿಯ ಪಠ್ಯಕ್ರಮವನ್ನೇ ಬದಲಾಯಿಸಬೇಕಾದ ಅನಿವಾರ್ಯತೆ ಇತ್ತು. ಈಗ ಶಾಸಕ ಖಾದರ್ ಅವರು ಈ ವಿಚಾರವನ್ನು ಎತ್ತಿರುವುದರಿಂದ ಶೀಘದಲ್ಲೆ ಪಠ್ಯದಲ್ಲಿ ಸ್ಥಳೀಯ ಇತಿಹಾಸವನ್ನು ಸೇರಿಸಿಕೊಳ್ಳಲಾಗುವುದು. ಸ್ಥಳೀಯ ಇತಿಹಾಸ ಅಧ್ಯಯನಕಾರರ ಮಂಡಳಿಯ ಸದಸ್ಯರ ಜೊತೆ ಸಮಾಲೋಚನೆ ನಡೆಸಿ ಪಠ್ಯಕ್ರಮವನ್ನು ಅಂತಿಮಗೊಳಿಸಲಾಗುವುದು ಎಂದಿದ್ದಾರೆ.

ಇದು ಕೆಲವು ಇತಿಹಾಸ ಉಪನ್ಯಾಸಕರು ಸೃಷ್ಟಿಸಿರುವ ಅನಗತ್ಯ ವಿವಾದ ಎಂದು ಇತಿಹಾಸ ಅಧ್ಯಯನ ಮಂಡಳಿಯ ಅಧ್ಯಕ್ಷ ಬಿ ಉದಯ ಆರೋಪಿಸಿದ್ದಾರೆ. ಪ್ರಾದೇಶಿಕ ಇತಿಹಾಸವನ್ನು ಸೇರಿಸದಿರುವುದು ಉದ್ದೇಶಪೂರ್ವಕವಲ್ಲ, 20% ಪಠ್ಯ ಬದಲಾವಣೆಯ ಮಿತಿಯಿಂದಾಗಿ ಸ್ಥಳೀಯ ಇತಿಹಾಸವನ್ನು ಸೇರಿಸಲಾಗಿಲ್ಲ. ಪಠ್ಯವನ್ನು ಪೂರ್ತಿಯಾಗಿ ಬದಲಾಯಿಸಬೇಕಾಗಿದ್ದಲ್ಲಿ ಅದಕ್ಕೆ ರಾಜ್ಯ ಸರ್ಕಾರದ ಅನುಮತಿ ಬೇಕಾಗುತ್ತದೆ. ವಿವಾದ ಸೃಷ್ಟಿಸುವವರು ಮೊದಲೆ ಬಂದು ಈ ಬಗ್ಗೆ ಒತ್ತು ನೀಡಬೇಕಾಗಿತ್ತು. ಮಂಗಳವಾರ ನಡೆಯಲಿರುವ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.