ಉಡುಪಿ: ಪ್ರವಾಹ ಮತ್ತು ತುರ್ತು ಸಂದರ್ಭದಲ್ಲಿ ಹಾಗೂ ಅನಾರೋಗ್ಯ ಪೀಡಿತರು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿರುವ ರೆಡ್ ಕ್ರಾಸ್ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.
ಅವರು ಶನಿವಾರ, ಉಡುಪಿಯ ರೆಡ್ ಕ್ರಾಸ್ ಭವನದಲ್ಲಿ, ಜಿಲ್ಲೆಯ ನೆರೆ ಸಂತ್ರಸ್ಥರಿಗೆ ಪರಿಹಾರದ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ನೆರವು ನೀಡುವ ರೆಡ್ ಕ್ರಾಸ್ನ ಕಾರ್ಯಗಳು ಅನುಕರಣೀಯವಾಗಿದ್ದು, ಪ್ರವಾಹ ಮುಂತಾದ ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸುವಾಗ ಸರ್ಕಾರಕ್ಕೆ ಉತ್ತಮ ಸಹಕಾರ ನೀಡುತ್ತಿದ್ದು, ಜಿಲ್ಲಾಡಳಿತದ ಮೂಲಕ ರೆಡ್ಕ್ರಾಸ್ನ ಕಾರ್ಯಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಪ್ರೀತಿ ಗೆಹ್ಲೋಟ್ ತಿಳಿಸಿದರು.
ಜಿಲ್ಲೆಯಲ್ಲಿ ನರೆಯಿಂದ ಸಂತ್ರಸ್ಥರಾದ 40 ಕುಟುಂಬಗಳಿಗೆ ಪರಿಹಾರದ ಕಿಟ್ಗಳನ್ನು ಸಿಇಓ ವಿತರಿಸಿದರು.
ಭಾರತೀಯ ರೆಡ್ಕ್ರಾಸ್ ಹೆಡ್ಕ್ವಾಟ್ರಸ್ನ ರಾಷ್ಟ್ರೀಯ ಮಂಡಳಿಯ ಸದಸ್ಯ ಬಸ್ರೂರು ರಾಜೀವ ಶೆಟ್ಟಿ, ಉಡುಪಿ ರೆಡ್ ಕ್ರಾಸ್ ನ ಸಭಾಪತಿ ಡಾ. ಉಮೇಶ್ ಪ್ರಭು, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಖಜಾಂಚಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಉಡುಪಿ ರೆಡ್ ಕ್ರಾಸ್ ಘಟಕದ ಉಪ ಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ ಸ್ವಾಗತಿಸಿದರು. ಜಯರಾಮ ಆಚಾರ್ಯ ನಿರೂಪಿಸಿ, ವಂದಿಸಿದರು.












