ರೆಡ್ ಬರ್ಡ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ

ಕಲಬುರಗಿ : ರೆಡ್ ಬರ್ಡ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ತರಬೇತಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪೇಟೆ ಸಿರೂರು ಗ್ರಾಮದ ಬಳಿ ನಡೆದಿದೆ.

ಕಲಬುರಗಿಯಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ; ಪೈಲಟ್, ತರಬೇತುದಾರ ಪ್ರಾಣಾಪಾಯದಿಂದ ಪಾರು

ಘಟನೆಯಲ್ಲಿ ಪೈಲಟ್ ಹಾಗು ತರಬೇತುದಾರ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಖಾಸಗಿ ವಿಮಾನ ತರಬೇತಿ ‘ರೆಡ್ ಬರ್ಡ್ ಫ್ಲೈಟ್ ಟ್ರೇನಿಂಗ್ ಅಕಾಡೆಮಿಯ’ ಎರಡು ಆಸನಗಳ ವಿಮಾನ ಇದಾಗಿದ್ದು, ಯಾವುದೇ ಪ್ರಾಣಹಾನಿಯಾಗಲಿ ಅಥವಾ ವಿಮಾನಕ್ಕೆ ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ದೇಶಿಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನವು ತಾಂತ್ರಿಕ ದೋಷಗಳನ್ನು ಎದುರಿಸಿತು.

ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಗೆ ತಿಳಿಸಿದ ನಂತರ ಪೈಲಟ್ ಕೃಷಿ ಭೂಮಿಗೆ ಇಳಿಯುವಂತೆ ಸೂಚನೆ ನೀಡಿದ ಬಳಿಕ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಪೈಲಟ್ ಮತ್ತು ತರಬೇತುದಾರ ಸುರಕ್ಷಿತವಾಗಿದ್ದಾರೆ.

ಮಂಗಳೂರು ಏರ್ಪೋರ್ಟ್ ರನ್ ವೇಯಲ್ಲಿ ತಾಂತ್ರಿಕ ಸಮಸ್ಯೆ: ಕಳೆದ ಮೇ ತಿಂಗಳ ಸಂದರ್ಭದಲ್ಲಿಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ ವೇನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಲ್ಯಾಂಡ್ ಆಗಬೇಕಿದ್ದ ವಿಮಾನ ಡೈವರ್ಟ್ ಮಾಡುವ ಮೂಲಕ ಸಮಸ್ಯೆ ಸರಿಪಡಿಸಲಾಗಿತ್ತು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ವಿದ್ಯುತ್ ಕಡಿತಗೊಂಡಿತ್ತು. ಆದ್ದರಿಂದ ರನ್‌ ವೇನಲ್ಲಿರುವ ದೀಪಗಳು ಉರಿಯುತ್ತಿರಲಿಲ್ಲ. ಪರಿಣಾಮ ಮುಂಬೈನಿಂದ ಆಗಮಿಸಿದ ಇಂಡಿಗೋ 6E5188 ವಿಮಾನ ಲ್ಯಾಂಡ್ ಆಗದೇ ವಾಪಸ್ ಆಗಿದೆ. ಎಟಿಸಿ ಸೂಚನೆ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರು ಏರ್ಪೋರ್ಟ್‌ನಲ್ಲಿ ವಿಮಾನ ಲ್ಯಾಂಡ್ ಆಗಿತ್ತು.

ಸ್ಥಳೀಯ ಪೊಲೀಸ್ ಅದಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಹಾಗು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಘಟನೆ ಕುರಿತು ತನಿಖೆ ನಡೆಸಲು ಡಿಜಿಸಿಎ ತಂಡ ಕಲಬುರಗಿಗೆ ಭೇಟಿ ನೀಡಲಿದೆ ಎಂದು ಹೇಳಿದ್ದಾರೆ.

ಈ ಹಿಂದೆಯೂ ಮೇ 30 ರಂದು ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಇದೇ ಸಂಸ್ಥೆಗೆ ಸೇರಿದ ವಿಟಿ-ಆರ್​ಬಿಎಫ್ ತರಬೇತಿ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಬೆಳಗಾವಿ ಜಿಲ್ಲೆಯ ಹೊರವಲಯದ ಮಾರಿಹಾಳ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆ ಸಂದರ್ಭದಲ್ಲೂ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಈ ತರಬೇತಿ ವಿಮಾನವು ಸಾಂಬ್ರಾ ವಿಮಾನ ನಿಲ್ದಾಣದಿಂದ ಹೊರಟಿತ್ತು. ಇಬ್ಬರು ಪ್ರಯಾಣಿಸುತ್ತಿದ್ದು. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ” ಎಂದು ಸಾಂಬ್ರಾ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದರು.