ಉಡುಪಿ ಜೂ11: ಪ್ರತಿ ವರ್ಷ ವಿಶ್ವದಾದ್ಯಂತ ಜೂನ್ 12 ರಂದು “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ” ವನ್ನಾಗಿ ಆಚರಣೆ ಮಾಡುತ್ತಿದ್ದು, ಆದರೆ ಈ ವರ್ಷ ಕೋವಿಡ್-19 2ನೇ ಅಲೆಯ ಕಾರಣದಿಂದಾಗಿ ವಿಶೇಷವಾಗಿ ಸಭಾ ಕಾರ್ಯಕ್ರಮಗಳನ್ನೊಳಗೊಂಡ ವಿವಿಧರೀತಿಯ ಕಾರ್ಯಕ್ರಮಗಳ ಮೂಲಕ ಆಚರಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್-19 ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದರ ಪರಿಣಾಮವಾಗಿ ಆರ್ಥಿಕ ಮತ್ತು ಕಾರ್ಮಿಕ ಮಾರುಕಟ್ಟೆಯ ಆಘಾತವು ಜನರಜೀವನ ಹಾಗೂ ಜೀವನೋಪಾಯದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಈ ಬಿಕ್ಕಟ್ಟು ಸಾವಿರಾರು ದುರ್ಬಲ ಮಕ್ಕಳನ್ನು ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಗೆ ತಳ್ಳಬಹುದಾಗಿದೆ. ಮಕ್ಕಳನ್ನು ಕಷ್ಟಕರವಾದ ಮತ್ತು ಹೆಚ್ಚು ಸಮಯ ಕೆಲಸ ಮಾಡುವ ಸಂದರ್ಭಗಳನ್ನು ಎದುರಿಸುವ ಅಪಾಯ ಒದಗುವ ಸಾಧ್ಯತೆ ಇರುತ್ತದೆ.
ಮಕ್ಕಳನ್ನು ಕೋವಿಡ್-19 ಕಾರಣದಿಂದಾಗಿ ಬಾಲಕಾರ್ಮಿಕತೆಯಿಂದ ರಕ್ಷಿಸಲು ಹಿಂದೆoದಿಗಿoತಲೂ ಹೆಚ್ಚು ಶ್ರಮಿಸಬೇಕಾಗಿರುತ್ತದೆ. ಆದ್ದರಿಂದ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬಾರದು, ಮಾಡಿಕೊಂಡಲ್ಲಿ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆಯ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರಡಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
14 ವರ್ಷಕ್ಕಿಂತಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ವೃತ್ತಿ ಮತ್ತು ಪ್ರಕ್ರಿಯೆಗಳಲ್ಲಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವುದು ಮತ್ತು ಅವಕಾಶ ಕಲ್ಪಿಸಿಕೊಡುವುದು ನಿಷೇಧಿಸಲ್ಪಟ್ಟಿದೆ, 14 ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳುವುದನ್ನು ನಿಷೇಧಿಸಲ್ಪಟ್ಟಿದೆ, ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲೀಕರಿಗೆ 6 ತಿಂಗಳುಗಳಿಗೆ ಕಡಿಮೆ ಇಲ್ಲದಂತೆ 2 ವರ್ಷದವರೆಗೆಜೈಲು ಶಿಕ್ಷೆ, ಕನಿಷ್ಠ ರೂ.20,000/- ದಿಂದ ಗರಿಷ್ಠ ರೂ.50,000/- ದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ.
ಆದ್ದರಿಂದ ಜಿಲ್ಲೆಯ ಎಲ್ಲಾ ಉದ್ದಿಮೆದಾರರು ನಾಗರೀಕರು, ಕಾರ್ಮಿಕ ಸಂಘದ ಪದಾಧಿಕಾರಿಗಳು, ಜಿಲ್ಲಯ ಮಕ್ಕಳನ್ನು ಬಾಲಕಾರ್ಮಿಕದಿಂದ ರಕ್ಷಿಸಿ, ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕೆಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆ ತಿಳಿಸಿದ್ದಾರೆ.