ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಇಂದು ಚಿಕ್ಕಮಗಳೂರಿನ ಐಡಿಎಸ್ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭವಾಗಿದೆ. ಒಟ್ಟು 1,822 ಅಂಚೆ ಮತಗಳನ್ನು ಮರು ಎಣಿಕೆಗೆ ಒಳಪಡಿಸಲಾಗುತ್ತಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಮತ ಎಣಿಕೆ ಆರಂಭಕ್ಕೂ ಒಂದು ಗಂಟೆ ಮುನ್ನವೇ ಮತಪೆಟ್ಟಿಗೆಯ ಸೀಲ್ ತೆರೆಯಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಕಾಂಗ್ರೆಸ್ ಶಾಸಕನ ಏಜೆಂಟ್ ಸೇರಿದಂತೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಬಂಧ ಹೈಕೋರ್ಟ್ಗೆ ಮಾಹಿತಿ ನೀಡಲಾಗುವುದು ಎಂದು ಚುನಾವಣಾ ಅಧಿಕಾರಿಗಳು ಮನವೊಲಿಕೆ ಮಾಡಿದ ಬಳಿಕ ಮರು ಎಣಿಕೆ ಪ್ರಕ್ರಿಯೆ ಮುಂದುವರಿಸಲಾಯಿತು.
ಈ ಹಿಂದೆ ನಡೆದ ಎಣಿಕೆಯಲ್ಲಿ 279 ಅಂಚೆ ಮತಗಳು ಅಮಾನ್ಯಗೊಂಡಿದ್ದವು. ಇದೀಗ ಆ ಮತಗಳನ್ನು ಪುನರ್ ಪರಿಶೀಲನೆ ನಡೆಸಿ, ಮಾನ್ಯ ಮತಗಳ ಎಣಿಕೆ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಮತ ಎಣಿಕೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಕೇಂದ್ರದ ಬಳಿ ಜಮಾಯಿಸಿದ್ದ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದರು. ಬಿಗಿ ಭದ್ರತೆಯ ನಡುವೆ ಮರು ಎಣಿಕೆ ಕಾರ್ಯ ಮುಂದುವರಿದಿದೆ.

















