ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಇಂದು ಚಿಕ್ಕಮಗಳೂರಿನ ಐ.ಡಿ.ಎಸ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭವಾಗಿದ್ದು, ಮತ ಎಣಿಕೆ ಆರಂಭಕ್ಕೂ ಮುನ್ನವೇ ಮತಪೆಟ್ಟಿಗೆಯ ಸೀಲ್ ತೆರೆಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಕಾಂಗ್ರೆಸ್ ಶಾಸಕನ ಏಜೆಂಟ್ ಸೇರಿದಂತೆ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಇದೀಗ ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಚುನಾವಣಾಧಿಕಾರಿಗಳು 20 ಮತಪೆಟ್ಟಿಗೆಗಳನ್ನೂ ಪರಿಶೀಲಿಸಿ, ಅಂಚೆ ಮತಗಳಿದ್ದ ಪೆಟ್ಟಿಗೆ ಸಂಪೂರ್ಣ ಸುರಕ್ಷಿತವಾಗಿದೆ. ಅಲ್ಲದೇ ಅವುಗಳ ಸೀಲ್ ಸುಸ್ಥಿತಿಯಲ್ಲಿದೆ. ಸೀಲ್ ಇಲ್ಲದ ಮತಪೆಟ್ಟಿಗೆಯಲ್ಲಿದ್ದುದ್ದು, ಚುನಾವಣೆಗೆ ಸಂಬಂಧಿಸಿದ ಸಾಮಾನ್ಯ ದಾಖಲೆ ಪತ್ರಗಳಷ್ಟೇ ಎಂದು ಅಭ್ಯರ್ಥಿಗಳ ಸಮ್ಮುಖದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇದರಿಂದ ಗೊಂದಲ ಬಗೆಹರಿದಿದ್ದು, ಬಿಗಿ ಭದ್ರತೆಯ ನಡುವೆ ಮರು ಎಣಿಕೆ ಕಾರ್ಯ ಮುಂದುವರಿದಿದೆ.

















