ಮಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ 2012ರ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿದ್ದು, ವಿಶೇಷ ತನಿಖಾ ತಂಡ (ಎಸ್ಐಟಿ) ಶನಿವಾರ ಐವರು ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ಸಂತ್ರಸ್ತೆಯ ಮಾವ ವಿಠಲ ಗೌಡ ಸೇರಿದಂತೆ ಕೃಷ್ಣಪ್ಪ, ಪುರಂದರ ಗೌಡ, ಯಶೋದಾ ಹಾಗೂ ಅವರ ಪುತ್ರ ಪ್ರತೀಕ್ ಅವರು ಮಂಗಳೂರಿನ ಎಸ್ಐಟಿ ಕಚೇರಿಗೆ ಹಾಜರಾಗಿ ಅಧಿಕೃತ ಹೇಳಿಕೆ ನೀಡಿದ್ದಾರೆ.
ಎಸ್ಐಟಿ ತನಿಖಾಧಿಕಾರಿ ಎಸ್ಪಿ ಲೋಕೇಶ್ ಜಗಲಾಸರ್ ಮತ್ತು ಎಸಿಪಿ ಮನೋಜ್ ನಾಯಕ್ ಅವರ ಸಮ್ಮುಖದಲ್ಲಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆದಿದೆ.
2012ರ ಅಕ್ಟೋಬರ್ 9ರಂದು ಸೌಜನ್ಯಾ ಹತ್ಯೆಯಾಗುವ ಮುನ್ನ ಧರ್ಮಸ್ಥಳ ಗ್ರಾಮದ ಸ್ನಾನಘಟ್ಟದ ಬಳಿ ನಡೆದುಕೊಂಡು ಹೋಗುತ್ತಿದ್ದುದನ್ನು ಕೊನೆಯದಾಗಿ ನೋಡಿದವರಲ್ಲಿ ಈ ಐವರೂ ಸೇರಿದ್ದಾರೆ ಎನ್ನಲಾಗಿದೆ. ಹೀಗಾಗಿ, ಇವರ ಹೇಳಿಕೆಗಳು ಮರುತನಿಖೆಯಲ್ಲಿ ಮಹತ್ವ ಪಡೆದುಕೊಂಡಿವೆ.
ದಶಕಕ್ಕೂ ಹೆಚ್ಚು ಹಳೆಯದಾದ ಪ್ರಕರಣದ ಮರುತನಿಖೆಯ ಭಾಗವಾಗಿ, ಸೌಜನ್ಯಾರನ್ನು ಕೊನೆಯದಾಗಿ ನೋಡಿದವರಿಂದ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಎಸ್ಐಟಿ ಮುಂದುವರಿಸಿದೆ.















