ಹೊಸ ವೈಶಿಷ್ಟ್ಯ ಜಾರಿಗೆ ತರ್ತಿದೆ RBI : ನಿಮ್ಮ ಧ್ವನಿಯ ಮೂಲಕವೇ ಯುಪಿಐ ಪೇಮೆಂಟ್

ಮುಂಬೈ: ಸುರಕ್ಷಿತ ಮತ್ತು ಸುಭದ್ರ ರೀತಿಯಲ್ಲಿ ಹಣಕಾಸು ವಹಿವಾಟುಗಳನ್ನು ಪ್ರಾರಂಭಿಸಲು ಮತ್ತು ಪೂರ್ಣಗೊಳಿಸಲು ಬಳಕೆದಾರರಿಗೆ ಅನುವು ಮಾಡಿಕೊಡುವ “ಸಂಭಾಷಣಾ ಪಾವತಿ” (conversational payments) ಯೋಜನೆಯ ಮೇಲೆ ಆರ್​ಬಿಐ ಕೆಲಸ ಮಾಡುತ್ತಿದೆ ಎಂದು ಗವರ್ನರ್ ತಿಳಿಸಿದ್ದಾರೆ.ಧ್ವನಿ ಅಥವಾ ಸಂಭಾಷಣೆಯ ಮೂಲಕವೇ ಯುಪಿಐ ಪಾವತಿಗಳನ್ನು ಪೂರ್ಣಗೊಳಿಸಬಹುದಾದ ವ್ಯವಸ್ಥೆಯೊಂದನ್ನು ಆರ್​ಬಿಐ ಜಾರಿಗೆ ತರುತ್ತಿದೆ. ಧ್ವನಿಯ ಮೂಲಕ ಹಣ ಪಾವತಿಸುವ ವ್ಯವಸ್ಥೆಯೊಂದನ್ನು ಜಾರಿಗೊಳಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್​ಬಿಐ) ಸಿದ್ಧತೆ ನಡೆಸಿದೆ.

ಪ್ರಸ್ತಾವಿತ ಸಂಭಾಷಣಾ ಪಾವತಿ ವ್ಯವಸ್ಥೆಯು ಕೃತಕ ಬುದ್ಧಿಮತ್ತೆ ಚಾಲಿತವಾಗಿರುತ್ತದೆ ಎಂಬುದು ವಿಶೇಷ. ಹಣಕಾಸು ನೀತಿ ಸಭೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಗವರ್ನರ್ ಶಕ್ತಿಕಾಂತ ದಾಸ್ ಈ ಮಾಹಿತಿ ನೀಡಿದರು.ಯುಪಿಐ ಎಂಬುದು ಸುಲಭವಾಗಿ ಹಾಗೂ ಸುರಕ್ಷತೆ, ಭದ್ರತೆಗಳೊಂದಿಗೆ ನೈಜ-ಸಮಯದಲ್ಲಿ ಬಳಸಬಹುದಾದ ಪಾವತಿ ವ್ಯವಸ್ಥೆ. ಇದು ಭಾರತದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ತಂದಿದೆ. ಕಾಲಾನಂತರದಲ್ಲಿ ಯುಪಿಐಗೆ ಸೇರಿಸಲಾದ ಅನೇಕ ಹೊಸ ವೈಶಿಷ್ಟ್ಯಗಳಿಂದಾಗಿ ವಿವಿಧ ರೀತಿಯ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತಿದೆ.

ಕೃತಕ ಬುದ್ಧಿಮತ್ತೆಯನ್ನು (ಎಐ) ಇತ್ತೀಚೆಗೆ ಡಿಜಿಟಲ್ ಆರ್ಥಿಕತೆಯೊಂದಿಗೆ ಹೆಚ್ಚು ಸಂಯೋಜಿಸಲ್ಪಡುತ್ತಿರುವುದರಿಂದ, ಸಂಭಾಷಣೆಯ ಮೂಲಕ ಪಾವತಿಗಳನ್ನು ಪೂರ್ಣಗೊಳಿಸುವುದು ಯುಪಿಐ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲಿದೆ ಎಂದು ಗವರ್ನರ್ ಹೇಳಿದರು.ಆದ್ದರಿಂದ ಯುಪಿಐನಲ್ಲಿ “ಸಂಭಾಷಣಾ ಪಾವತಿಗಳು” ಎಂಬ ನವೀನ ಪಾವತಿ ವಿಧಾನವನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿದೆ. ಇದು ಎಐ ಚಾಲಿತ ವ್ಯವಸ್ಥೆಯೊಂದಿಗೆ ಸುರಕ್ಷಿತ ಮತ್ತು ಸುಭದ್ರ ವಾತಾವರಣದಲ್ಲಿ ವಹಿವಾಟುಗಳನ್ನು ಪ್ರಾರಂಭಿಸಲು ಮತ್ತು ಪೂರ್ಣಗೊಳಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಆರ್​ಬಿಐ ತಿಳಿಸಿದೆ.

ಯಾವುದೇ ವಹಿವಾಟು ನಡೆಸಲು ಬಳಕೆದಾರರು ವರ್ಚುವಲ್ ಪೇಮೆಂಟ್ ಅಡ್ರೆಸ್ (ವಿಪಿಎ) ಎಂದು ಕರೆಯಲ್ಪಡುವ ವರ್ಚುವಲ್ ವಿಳಾಸವನ್ನು ಮಾತ್ರ ಬಳಸಿದರೆ ಸಾಕು. ಯುಪಿಐ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ಅಭಿವೃದ್ಧಿಪಡಿಸಿದೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಿಯಂತ್ರಿಸುತ್ತದೆ.ಈ ಸಂಭಾಷಣಾ ಪಾವತಿ ವಿಧಾನವು ಸ್ಮಾರ್ಟ್​ ಪೋನ್​ಗಳು ಮತ್ತು ಫೀಚರ್ ಫೋನ್ ಆಧಾರಿತ ಯುಪಿಐ ಚಾನೆಲ್​ಗಳಲ್ಲಿ ಲಭ್ಯವಾಗಲಿದೆ. ಇದರಿಂದಾಗಿ ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯು ಮತ್ತಷ್ಟು ಜನರಿಗೆ ಅನುಕೂಲಕರವಾಗಲಿದೆ. ಈ ಸೌಲಭ್ಯವು ಆರಂಭದಲ್ಲಿ ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಲಭ್ಯವಿರುತ್ತದೆ ಮತ್ತು ನಂತರ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಲಭ್ಯವಾಗಲಿದೆ. ಈ ಬಗ್ಗೆ ಎನ್​ಪಿಸಿಐಗೆ ಶೀಘ್ರದಲ್ಲೇ ಸೂಚನೆಗಳನ್ನು ನೀಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಇದು ಯುಪಿಐ ಪೂರ್ಣ ರೂಪವಾಗಿದೆ. ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಇದು ನಗದು ರಹಿತ ಆರ್ಥಿಕತೆಯನ್ನು ಸಾಧಿಸಲು ಭಾರತ ಕೈಗೊಂಡ ಮೊದಲ ಪ್ರಮುಖ ಹೆಜ್ಜೆಯಾಗಿದೆ. ಯುಪಿಐ ಐಡಿ ಮೂಲಕ ನಿಮ್ಮ ಸ್ಮಾರ್ಟ್​ಫೋನ್​ ಅನ್ನು ವರ್ಚುವಲ್ ಡೆಬಿಟ್ ಕಾರ್ಡ್ ಆಗಿ ಬಳಸಬಹುದು. ಯುಪಿಐ ಸಹಾಯದಿಂದ ನೀವು ಹಣವನ್ನು ಸ್ವೀಕರಿಸಬಹುದು ಮತ್ತು ಕಳುಹಿಸಬಹುದು.