ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐಗೆ ಲಿಂಕ್ ಮಾಡಲು ಅನುಮತಿಸಿದ ಭಾರತೀಯ ರಿಸರ್ವ್ ಬ್ಯಾಂಕ್

ನವದೆಹಲಿ: ರಿಸರ್ವ್ ಬ್ಯಾಂಕ್ ಬುಧವಾರ ಕ್ರೆಡಿಟ್ ಕಾರ್ಡ್‌ಗಳನ್ನು ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ನೊಂದಿಗೆ ಲಿಂಕ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದು ಯುಪಿಐ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಪಾವತಿಗಳನ್ನು ಮಾಡಲು ಇನ್ನೂ ಹೆಚ್ಚಿನ ಜನರಿಗೆ ಅನುವು ಮಾಡಿಕೊಡಲಿದೆ.

ಪ್ರಸ್ತುತ, ಯುಪಿಐ ಬಳಕೆದಾರರ ಡೆಬಿಟ್ ಕಾರ್ಡ್‌ಗಳ ಮೂಲಕ ಉಳಿತಾಯ ಅಥವಾ ಚಾಲ್ತಿ ಖಾತೆಗಳನ್ನು ಲಿಂಕ್ ಮಾಡುವ ಮೂಲಕ ವಹಿವಾಟುಗಳನ್ನು ನಡೆಸಲಾಗುತ್ತಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ದ್ವೈಮಾಸಿಕ ನೀತಿ ಪರಿಶೀಲನೆಯೊಂದಿಗೆ ನಿಯಂತ್ರಕ ಕ್ರಮಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಈ ಬಗ್ಗೆ ತಿಳಿಸಿ, “ಯುಪಿಐಗೆ ಕ್ರೆಡಿಟ್ ಕಾರ್ಡ್‌ಗಳನ್ನು ಲಿಂಕ್ ಮಾಡಲು ಅನುಮತಿಸಲು ಇದನ್ನು ಪ್ರಸ್ತಾಪಿಸಲಾಗಿದೆ” ಎಂದಿದ್ದಾರೆ.

ಮೊದಲಿಗೆ ಆರ್‌ಬಿಐ-ಪ್ರವರ್ತಿತ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ನೀಡುವ ರುಪೇ ಕ್ರೆಡಿಟ್ ಕಾರ್ಡ್‌ ಜೊತೆ ಈ ಸೌಲಭ್ಯವನ್ನು ಸಕ್ರಿಯಗೊಳಿಸಲಾಗುವುದು ಮತ್ತು ಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸಿದ ನಂತರ ಸೌಲಭ್ಯವನ್ನು ಎಲ್ಲರ ಉಪಯೋಗಕ್ಕೆ ಲಭ್ಯಗೊಳಿಸಲಾಗುವುದು ಎಂದು ಅವರು ಹೇಳಿದರು.

ಹೊಸ ವ್ಯವಸ್ಥೆಯು ಯುಪಿಐ ಪ್ಲಾಟ್‌ಫಾರ್ಮ್ ಮೂಲಕ ಪಾವತಿಗಳನ್ನು ಮಾಡುವಲ್ಲಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಮತ್ತು ಅನುಕೂಲಗಳನ್ನು ಒದಗಿಸುವ ನಿರೀಕ್ಷೆಯಿದೆ ಎಂದು ದಾಸ್ ಹೇಳಿದರು.