‘ಕೌನ್ ಬನೇಗಾ ಕರೋಡ್ ಪತಿ’ಗೆ ರವಿ ಕಟಪಾಡಿ ಆಯ್ಕೆ: ಜ.15ಕ್ಕೆ ಕಾರ್ಯಕ್ರಮ ಪ್ರಸಾರ

ಉಡುಪಿ: ಹಿಂದಿಯ ಸೋನಿ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಿ ಅಮಿತಾ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮಕ್ಕೆ ಕರಾವಳಿಯ ಪ್ರತಿಭೆ ರವಿ ಕಟಪಾಡಿ ಅವರು ಆಯ್ಕೆಯಾಗಿದ್ದಾರೆ.

ರವಿ ಕಟಪಾಡಿಯ ಮಾನವೀಯ ಕೆಲಸ ಗುರುತಿಸಿ ಅವರನ್ನು ಈ ಕಾರ್ಯಕ್ರಮಕ್ಕೆ ವಾಹಿನಿ ಆಯ್ಕೆಮಾಡಿದೆ. ಜನವರಿ 15ರಂದು ಸೋನಿ ವಾಹಿನಿಯಲ್ಲಿ ರವಿಯವರ ಕಾರ್ಯಕ್ರಮ ಪ್ರಸಾರ ಆಗಲಿದೆ.

ಒಂದು ವಾರದ ಹಿಂದೆ ರವಿ ಅವರಿಗೆ ಸೋನಿ ಟಿವಿಯಿಂದ ಕರೆ ಬಂದಿದ್ದು, ಈ ವೇಳೆ ರವಿ ಅವರು ನನ್ನಿಂದ ಆಗಲ್ಲವೆಂದು ಹೇಳಿದ್ದರು. ಬಳಿಕ ರವಿ ಅವರಿಗೆ ವಾಹಿನಿ ಧೈರ್ಯ ತುಂಬಿದೆ. ನಿಮ್ಮ ಕೆಲಸವನ್ನು ಸಮಾಜಕ್ಕೆ ತಿಳಿಸಲು ನೀವು ಭಾಗವಹಿಸಲೇಬೇಕು ಹೇಳಿತ್ತು. ಅದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ರವಿ ಒಪ್ಪಿದ್ದಾರೆ.

ಮೂರು ದಿನಗಳ ಹಿಂದೆ ಸೋನಿ ಟಿವಿಯವರು ಕಟಪಾಡಿಗೆ ಬಂದಿದ್ದು, ರವಿ ಅವರ ಮನೆ ಹಾಗೂ ಕಟಪಾಡಿಯಲ್ಲಿ ಶೂಟಿಂಗ್ ನಡೆಸಿದ್ದರು. ಸದ್ಯ ರವಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಂಬೈಗೆ ತೆರಳಿದ್ದಾರೆ.

ಬುಧವಾರದಿಂದ ಮುಂಬೈನ ಸೋನಿ ವಾಹಿನಿಯ ಸ್ಟುಡಿಯೋದಲ್ಲಿ ಶೂಟಿಂಗ್ ಆರಂಭವಾಗಲಿದೆ. ಆರಂಭದಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರಿಸಲಿದ್ದು, ಬಳಿಕ ಹಿಂದಿ ಸಿನಿಮಾ ರಂಗದ ಪ್ರಮುಖರೊಂದಿಗೆ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ರವಿ ಅವರು ಅಷ್ಟಮಿಯ ಸಂದರ್ಭದಲ್ಲಿ ವಿಭಿನ್ನ ವೇಷಧರಿಸಿ ಅದರಿಂದ ಬರುವ ಹಣದಿಂದ ಹಲವಾರು ಬಡವರಿಗೆ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡಿದ್ದಾರೆ. ಅವರ ಈ ಸಾಮಾಜಿಕ ಕಾರ್ಯವು ಇದೀಗ ಸೋನಿಯ ‘ಕೌನ್ ಬಗೇಗ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿದೆ.